ಸೋರಿಯಾಸಿಸ್ ತೈಲವನ್ನು ಮನೆಯಲ್ಲಿಯೇ ತಯಾರಿಸುವುದು ಹೇಗೆ?
ಸೋರಿಯಾಸಿಸ್ ಚಿಕಿತ್ಸೆಯಲ್ಲಿ ತೈಲಗಳ ಬಳಕೆಯು ಅತ್ಯಂತ ಪರಿಣಾಮಕಾರಿ. ಅದರಲ್ಲೂ ಔಷಧಯುಕ್ತ ತೈಲಗಳ ಬಳಕೆಯು ಶೀಘ್ರವಾಗಿ ಸೋರಿಯಾಸಿಸ್ ಲಕ್ಷಣಗಳನ್ನು ನಿವಾರಿಸುತ್ತವೆ. ನೀವು ಆಯುರ್ವೇದ ವೈದ್ಯರ ಚಿಕಿತ್ಸಾ ಸಲಹೆಯನ್ನನುಸರಿಸಿದರೆ ಔಷಧಯುಕ್ತವಾದ ತೈಲದ ಚಿಕಿತ್ಸೆಯ ಒಂದು ಭಾಗವಾಗಿ ದಿನನಿತ್ಯ ದೇಹದೆಲ್ಲೆಡೆ ಹಚ್ಚಲು ತಿಳಿಸಿರುತ್ತಾರೆ. ಸೋರಿಯಾಸಿಸ್ಗೆ ಇಂತಹ ಬಹು ಪ್ರಯೋಜನಕಾರಿ ಔಷಧಯುಕ್ತ ತೈಲವನ್ನು (psoriasis oil) ನೀವು ಮನೆಯಲ್ಲಿಯೇ ತಯಾರಿಸಿದರೆ ಆರ್ಥಿಕವಾಗಿಯೂ ನಿಮಗೆ ಸಹಾಯವಾಗಬಲ್ಲದು. ಹಾಗಾದರೆ ಇಂತಹ ಔಷಧಯುಕ್ತ ತೈಲವನ್ನು ಮನೆಯಲ್ಲಿಯೇ ಹೇಗೆ ತಯಾರಿಸಬಹುದೆಂದು ತಿಳಿಯಲು ಕುತೂಹಲಿಗಳಾಗಿದ್ದೀರಾ? ಹೌದಾದಲ್ಲಿ ನಿಮ್ಮ ಓದನ್ನು ಮುಂದುವರೆಸಿರಿ.
ಸೋರಿಯಾಸಿಸ್ ರೋಗಿಗಳು ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಗಳೆಂದರೆ ಚರ್ಮದ ಶುಷ್ಕತೆ, ಅತಿಯಾದ ತುರಿಕೆ ಮತ್ತು ಚರ್ಮದಲ್ಲಿನ ಬಿರುಕುಗಳು. ಇವುಗಳ ಪರಿಣಾಮಕಾರಿಯಾದ ನಿಯಂತ್ರಣವು ಸೋರಿಯಾಯಸಿಸ್ನ ತೀವ್ರತೆಯನ್ನು ಕಡಿಮೆಮಾಡುವಲ್ಲಿ ಸಹಕಾರಿ, ಆದರೆ ಇವುಗಳನ್ನು ನಿರ್ವಹಿಸುವುದು ಪ್ರಯಾಸದಾಯಕ ಕೆಲಸ. ವಿವಿಧ ಕ್ರೀಮ್‌ಗಳು, ಮುಲಾಮುಗಳು, ಎಣ್ಣೆಗಳು, ಮಾಯಿಶ್ಚರೈಸರ್‌ಗಳ ಬಳಕೆಯು ಚರ್ಮದಲ್ಲಿನ ಶುಷ್ಕತೆ, ತುರಿಕೆಯ ನಿವಾರಣೆಗೆ ಸಹಾಯ ಮಾಡುತ್ತದೆ. ಸೋರಿಯಾಸಿಸ್ ಒಮ್ಮೆ ಕಾಣಿಸಿಕೊಂಡಲ್ಲಿ ಇದು ಜೀವನಪರ್ಯಂತ ಕಾಡುವ ರೋಗವಾಗಿದ್ದು ಜೀವನದುದ್ದಕ್ಕೂ ಔಷಧಿಗಳ ಬಳಕೆಯು ಅನಿವಾರ್ಯ. ವೈದ್ಯರು ಹೇಳಿದ ಔಷಧಿಯೊಂದಿಗೆ ಚರ್ಮದ ಒಣಗುವಿಕೆಯನ್ನು ತಡೆಯಲು ಔಷಧಯುಕ್ತ ಎಣ್ಣೆ, ಮಾಯಿಶ್ಚರೈಸರ್ಗಳನ್ನು ನಿಯಮಿತವಾಗಿ ಬಳಸಬೇಕಾಗುತ್ತದೆ.
ಸೋರಿಯಾಸಿಸ್ ಚಿಕಿತ್ಸೆಯಲ್ಲಿ ವೈದ್ಯಕೀಯ ತಪಾಸಣೆ, ವಿವಿಧ ಪರೀಕ್ಷೆಗಳ ವೆಚ್ಚ, ಔಷಧಗಳ ವೆಚ್ಚ ಅನೇಕರಿಗೆ ಕೆಲವೊಮ್ಮೆ ಹೊರೆಯಾಗಬಹುದು. ಇಂತಹ ಸ್ಥಿತಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಕಡಿಮೆ ವೆಚ್ಚದ ಮಾರ್ಗದ ಹುಡುಕಾಟವು ಅನೇಕರಿಗೆ ಸವಾಲಾಗಿತ್ತು. ಇಂತಹ ಅನ್ವೇಷಣೆಯ ಉತ್ತರವಾಗಿ ಆಯುರ್ವೇದ, ಸಿದ್ದ ವೈದ್ಯಪದ್ಧತಿಯಲ್ಲಿ ಬಳಕೆಯಲ್ಲಿರುವ ಒಂದು ವಿಶೇಷ ತೈಲವು (psoriasis oil) ಸೋರಿಯಾಸಿಸ್ ರೋಗದಲ್ಲಿ ಬಹುಪ್ರಯೋಜನಕಾರಿಯೆಂದು ಬಹಳ ಹಿಂದಿನಿಂದಲೂ ಉಪಯೋಗಿಸಲ್ಪಡುತ್ತಿದೆ. ಈ ಔಷಧೀಯ ತೈಲವನ್ನು ಸೋರಿಯಾಸಿಸ್ ಮತ್ತು ಇತರ ಚರ್ಮ ರೋಗಗಳಿಗೆ ಸಾಂಪ್ರದಾಯಿಕ ಔಷಧಿಗಳಾಗಿ ಉಪಯೋಗಿಸಲಾಗುತ್ತಿದೆ. ಈ ತಯಾರಿಕೆಯ ಆಧಾರದ ಮೇಲೆ ಮಾರುಕಟ್ಟೆಯಲ್ಲಿ ಹಲವಾರು ಆಯುರ್ವೇದ ಮತ್ತು ಸಿದ್ಧ ಪದ್ದತಿಯ ತೈಲಗಳು ಲಭ್ಯವಿದೆ. ಇಂತಹ ಪರಿಣಾಮಕಾರಿ, ಕನಿಷ್ಠ ವೆಚ್ಚದ ಔಷಧಯುಕ್ತವಾದ ಎಣ್ಣೆಯನ್ನು ನೀವು ನಿಮ್ಮ ಮನೆಯಲ್ಲಿಯೇ ಹೇಗೆ ತಯಾರಿಸಬಹುದೆಂದು ತಿಳಿಯಿರಿ.
ಆಯುರ್ವೇದದಲ್ಲಿ ಗಿಡಮೂಲಿಕೆಗಳನ್ನು ಔಷಧಿಯಾಗಿ ಹೇಗೆ ಬಳಸಲಾಗುತ್ತದೆ?
ಆಯುರ್ವೇದವು ಅತ್ಯಂತ ಪುರಾತನವಾದ ವೈದ್ಯಕೀಯ ಪದ್ಧತಿಯಾಗಿದ್ದು, ಮಾನವಕುಲದ ಆರಂಭದಿಂದಲೂ ಇದರ ಬಳಕೆಯು ಭಾರತದಲ್ಲಿ ಜನಸಾಮಾನ್ಯರ ನಡುವೆ ಪ್ರಚಲಿತವಾಗಿದೆ. ಆಯುರ್ವೇದವು ರೋಗಗಳಿಗೆ ಚಿಕಿತ್ಸೆ ನೀಡಲು ಸಸ್ಯಗಳು ಮತ್ತು ಖನಿಜಗಳನ್ನು ಔಷಧಿಯಾಗಿ ಬಳಸುತ್ತದೆ. ಸಸ್ಯಗಳ ಔಷಧೀಯ ಗುಣಗಳನ್ನು ವಿವಿಧ ಆಯುರ್ವೇದ ಗ್ರಂಥಗಳಲ್ಲಿ ಹೇಳಿ ಅವುಗಳ ಉಪಯೋಗದ ಬಗ್ಗೆ ವಿವರಿಸಲಾಗಿದೆ.
ಆಯುರ್ವೇದವು ಜಗತ್ತಿನಲ್ಲಿರುವ ಎಲ್ಲಾ ವಸ್ತುಗಳು ಪಂಚಮಹಾಭೂತಗಳಿಂದ (ಆಕಾಶ, ಗಾಳಿ, ಬೆಂಕಿ, ನೀರು ಮತ್ತು ಭೂಮಿ) ಮಾಡಲ್ಪಟ್ಟಿದೆ ಎಂದು ಹೇಳುತ್ತದೆ. ಈ ಐದು ಮೂಲಭೂತ ಅಂಶಗಳು ವಿಭಿನ್ನ ಪ್ರಮಾಣದಲ್ಲಿ ಸೇರಿಕೊಂಡು ದೇಹದಲ್ಲಿ ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತವೆ. ಪಂಚಮಹಾಭೂತಗಳ ಪ್ರಾಬಲ್ಯವನ್ನು ಅವಲಂಬಿಸಿ ಅವುಗಳ ಕ್ರಿಯಾತ್ಮಕ ಗುಣಗಳನ್ನು ದೋಷಗಳು ಎಂದು ಕರೆಯಲಾಗುತ್ತದೆ. ಇವು ಸಂಖ್ಯೆಯಲ್ಲಿ ಮೂರು ಅವುಗಳೆಂದೆರೆ ವಾತ, ಪಿತ್ತ ಮತ್ತು ಕಫ ದೋಷ. ಇವುಗಳನ್ನು ಸಾಮಾನ್ಯವಾಗಿ ತ್ರಿದೋಷಗಳೆಂದೂ ಕರೆಯುತ್ತಾರೆ.
ದೇಹದಲ್ಲಿ ತ್ರಿದೋಷಗಳು ಸರಿಯಾಗಿ ಕಾರ್ಯನಿರ್ವಹಿಸಿದಾಗ ದೇಹವು ಆರೋಗ್ಯಕರವಾಗಿರುತ್ತದೆ. ದೋಷದ ಕಾರ್ಯಚಟುವಟಿಕೆಯಲ್ಲಿಯ ಯಾವುದೇ ಬದಲಾವಣೆಗಳು ರೋಗಕ್ಕೆ ಕಾರಣವಾಗುತ್ತವೆ. ಒಬ್ಬ ವ್ಯಕ್ತಿಗೆ ಕಾಯಿಲೆ ಬಂದಾಗ, ಆಯುರ್ವೇದ ಚಿಕಿತ್ಸೆಗಳು ದೋಷಗಳ ಕಾರ್ಯವನ್ನು ಸರಿಪಡಿಸಲು ಗಿಡಮೂಲಿಕೆಗಳನ್ನು ಬಳಸಿ ರೋಗವನ್ನು ಗುಣಪಡಿಸುತ್ತವೆ. ಗಿಡಮೂಲಿಕೆಗಳ ಗುಣಗಳನ್ನು ತಿಳಿದುಕೊಳ್ಳುವುದರಿಂದ ನಿರ್ದಿಷ್ಟ ರೋಗದಲ್ಲಿ ಯಾವುದನ್ನು ಬಳಸಬೇಕೆಂದು ತಿಳಿಯಲು ಸಹಾಯ ಮಾಡುತ್ತದೆ.
ಔಷಧಿಯಾಗಿ ಬಳಸಲಾಗದ ವಸ್ತು ಯಾವುದೂ ಜಗತ್ತಿನಲ್ಲಿ ಇಲ್ಲ ಎಂದು ಆಯುರ್ವೇದ ಹೇಳುತ್ತದೆ. ಭೂಮಿಯಲ್ಲಿರುವ ಪ್ರತಿಯೊಂದರ ಗುಣಕರ್ಮಗಳ ಜ್ಞಾನದಿಂದ ಅವುಗಳನ್ನು ಹೇಗೆ ಬಳಸಬೇಕೆಂದು ತಿಳಿದಿದ್ದರೆ ಭೂಮಿಯಲ್ಲಿರುವ ಯಾವುದನ್ನೂ ಕೂಡ ಔಷಧಿಯಾಗಿ ಬಳಸಬಹುದು. ಇಂತಹ ವಿಶೇಷ ಜ್ಞಾನದಿಂದ ಸೋರಿಯಾಸಿಸ್ ಮತ್ತು ಇತರ ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ರೈಟಿಯಾ ಟಿಂಕ್ಟೋರಿಯಾ (Wrightia Tinctoria) ಎಂಬ ಒಂದು ಮೂಲಿಕೆಯ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ.
ರೈಟಿಯಾ ಟಿಂಕ್ಟೋರಿಯಾ – ಸೋರಿಯಾಸಿಸ್ ಚಿಕಿತ್ಸೆಯಲ್ಲಿ ಹೆಚ್ಚು ಬಳಸುವ ಸಸ್ಯ
ಇದನ್ನು ಸ್ವೀಟ್ ಇಂದ್ರಜಾವೊ, ಪಾಲಾ ಇಂಡಿಗೊ ಪ್ಲಾಂಟ್, ಡೈಯರ್ಸ್ ಒಲಿಯಾಂಡರ್, ಕಾಮಾಲೆ ರೋಗ ನಿವಾರಣಾ ಮರ ಎಂದೂ ಕರೆಯಲ್ಪಡುತ್ತದೆ. ಇದನ್ನು ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ಸೋರಿಯಾಸಿಸ್, ಕಾಮಾಲೆ, ನೋವು ಮತ್ತು ಉರಿಯೂತದಂತಹ ಚರ್ಮ ರೋಗಗಳಿಗೆ ಸಾಂಪ್ರದಾಯಿಕ ಔಷಧಿಯಾಗಿ ಬಳಸಲಾಗುತ್ತದೆ. ಸಸ್ಯದಿಂದ ವಿಶೇಷವಾಗಿ ಎಲೆಗಳಿಂದ ಒಸರುವಂತಹ ಹಾಲನ್ನು ಉರಿಯೂತಕ್ಕೆ ನೇರವಾಗಿ ಹಚ್ಚುತ್ತಾರೆ.
ರೈಟಿಯಾ ಟಿಂಕ್ಟೋರಿಯಾಗೆ ಸ್ಕಾಟಿಷ್ ವೈದ್ಯ ಮತ್ತು ಸಸ್ಯವಿಜ್ಞಾನಿ ವಿಲಿಯಂ ರೈಟ್ರವರ (1740-1827) ಹೆಸರಿಡಲಾಗಿದೆ.
ವೈಜ್ಞಾನಿಕ ಹೆಸರು: ರೈಟಿಯಾ ಟಿಂಕ್ಟೋರಿಯಾ ಆರ್.ಬಿ.ಆರ್.
ಕುಟುಂಬ: ಅಪೊಕಿನೇಶಿಯ
ಉಪಯೋಗ : ಆಯುರ್ವೇದ, ಸಿದ್ಧ, ಯುನಾನಿ, ಹಳ್ಳಿಮದ್ದು, ಹೋಮಿಯೋಪತಿ
ವಿವರಣೆ: ಮರ
ಭಾಷಾವಾರು ಹೆಸರುಗಳು:
ಸಂಸ್ಕೃತ : ಅಸಿತಾ – ಕುತಂಜ, ಹೈಮಾರಕ, ಹಯಮರಕ, ಕುಟಜಾ, ಮಧುಯಿಂದ್ರಯವ, ಶ್ವೇತಾ ಕುಟಜಾ, ಸ್ತ್ರೀ ಕುಟಜಾ, ಶ್ವೇತಕುಟಜ.
ಕನ್ನಡದ ಹೆಸರುಗಳು : ಅಲಮಾರ, ಅಲಿಗಿಲಿ, ಬೆಪಲ್ಲಿ, ಬೆಪ್ಪಾಲೆ, ಬೆಪ್ಪಾಲಾ ಮರ, ಬೆಪ್ಪಾಲಂ, ಬೆಪ್ಪಲೆ, ದುಡಿರೊ, ಹಾಲೆ, ಹಲಗಲಿ, ಹೇಲ್, ಹಲ್ಲು ನೋವು ಮದ್ದು, ಹಲ್ಲುನೋವ್ ಮರ, ಹಲ್ಲುನೊವು ಮರ, ಹಲುಗಲೆ, ಹಲುಗಲಿ, ಕಾಡುನೀಲಿ, ಕಾಡುನಿಲಿ ಬೆಪ್ಪಾಲೆ, ಕಿರೆಕೋಡ್ಸಾ, ಕಿರಿ ಕೊಡಾಸಿಗೆ , ಕಿರಿಕೊಡಸಿಗೆ, ಕಿರಿಕೊಡಾಸಿಗೆ , ಕೊಡಮುರ್ಕಿ, ಕೊಡಸಿಗೆ , ಕೊಡ್ಮುರ್ಕಿ, ಕೊಡ್ಸಿಜ್, ಕೊಡುಮುರ್ಕಾ, ಕೊಡುರಕಾ, ಕುಡಾ, ನಾಯ್ಕುಲಿ, ಪಾಲೆ ಮಾರ, ವೆಪಾಲೆ, ವೆಪ್ಪಾಲೆ.
ಸಸ್ಯದ ವಿವರಣೆ:
ರೈಟಿಯಾ ಟಿಂಕ್ಟೋರಿಯಾವು ಮಧ್ಯಮ ಗಾತ್ರದ ಮರವಾಗಿದ್ದು 18 ಮೀಟರ್ನಷ್ಟು ಎತ್ತರದವರೆಗೆ ಬೆಳೆಯುತ್ತದೆ.
ತೊಗಟೆ ನಯವಾದ ಮತ್ತು ಹಳದಿ ಮಿಶ್ರಿತ ಕಂದು ಬಣ್ಣದಲ್ಲಿರುತ್ತದೆ ಮತ್ತು ಸುಮಾರು 10 ಮಿ.ಮೀ ದಪ್ಪವಾಗಿರುತ್ತದೆ. ತೊಗಟೆ ಕತ್ತರಿಸಿದಾಗ ಅಥವಾ ಹಾನಿಗೊಳಗಾದಾಗ ಇದು ಬಿಳಿ ಕ್ಷೀರವನ್ನು ಸ್ರವಿಸುತ್ತದೆ.
ಎಲೆಗಳು ಸರಳವಾಗಿದ್ದು, ವಿರುದ್ಧವಾಗಿ ಜೋಡಿಸಲ್ಪಟ್ಟು ಅಂಡಾಕಾರವಾಗಿ ಚೂಪಾಗಿರುತ್ತವೆ. ಸಾಮಾನ್ಯವಾಗಿ ಎಲೆಗಳು 10-20 ಸೆಂ.ಮೀ ಉದ್ದ ಮತ್ತು 5 ಸೆಂ.ಮೀ ಅಗಲವನ್ನು ಹೊಂದಿರುತ್ತವೆ. ಎಲೆಗಳು ರೋಮರಹಿತವಾಗಿರುತ್ತವೆ ಮತ್ತು ಕೆಲವೊಮ್ಮೆ ಕೆಳಭಾಗದಲ್ಲಿ ಮೃದುವಾಗಿರುತ್ತವೆ. ಎಲೆ ತೊಟ್ಟುಗಳು ಚಿಕ್ಕದಾಗಿರುತ್ತವೆ.
ಹೂವುಗಳು ಭಾರತದಲ್ಲಿ ಮಾರ್ಚ್ ನಿಂದ ಮೇ ತಿಂಗಳಲ್ಲಿ ಕಾಣಿಸಿಕೊಳ್ಳುತ್ತವೆ ಹಾಗು ಏಪ್ರಿಲ್ ನಿಂದ ಜೂನ್ ವರೆಗೆ ಹೆಚ್ಚಾಗಿರುತ್ತವೆ. ಬಿಳಿ ಹೂವುಗಳು ಕೊಂಬೆಗಳ ಕೊನೆಯಲ್ಲಿ 5–15 ಸೆಂ.ಮೀ. ಉದ್ದದಷ್ಟು ಹರಡಿರುತ್ತವೆ. ಹೂವುಗಳು 2-3 ಸೆಂ.ಮೀ ಉದ್ದವಿದ್ದು ಐದು ಬಿಳಿ ದಳಗಳನ್ನು ಹೊಂದಿದ್ದು, ಅವು ವಯಸ್ಸಾದಂತೆ ಮಸುಕಾದ ಹಳದಿ ಬಣ್ಣಕ್ಕೆ ತಿರುಗುತ್ತವೆ. ಹೂವುಗಳು ಉದ್ದವಾದ ದಳಗಳನ್ನು ಹೊಂದಿದ್ದು, ಅವು ತುದಿಯಲ್ಲಿ ದುಂಡಾಗಿರುತ್ತವೆ ಮತ್ತು ಫ್ರಾಂಗಿಪಾನಿಯ ಹೂವುಗಳಿಗೆ ಹೋಲುತ್ತವೆ.
ಕಾಯಿಗಳು ಸಾಮಾನ್ಯವಾಗಿ ಆಗಸ್ಟ್‌ನಲ್ಲಿ ಹಣ್ಣಾಗುತ್ತವೆ. ಹಣ್ಣು ಉರುಳೆಯಾಕಾರವಿದ್ದು, ಕಪ್ಪು-ಹಸಿರು ಬಿಳಿ ಚುಕ್ಕೆಗಳಿಂದ ಕೂಡಿದ್ದು, ಉದ್ದನೆಯ ಕೊಂಬಿನಂಥದ್ದು ಮತ್ತು ತುದಿಯಲ್ಲಿ ಕೂಡಿಕೊಂಡಿರುತ್ತವೆ. ಬೀಜಗಳು ಕಂದು ಮತ್ತು ಚಪ್ಪಟೆಯಾಗಿರುತ್ತವೆ. ಬೀಜ ಪ್ರಸರಣವು ಗಾಳಿಯಿಂದ ಮತ್ತು ಪರಾಗಸ್ಪರ್ಶವು ಕೀಟಗಳಿಂದ ಆಗುವುದು.
ರಾಸಾಯನಿಕ ಸಂಯೋಜನೆಗಳು:
ಬೀಜಗಳು ಇಲ್ಲದೆ, ಪಾಡ್‌ಗಳಲ್ಲಿ ಸೈಕ್ಲಾರ್ಟೇನ್‌ಗಳು, ಸೈಕ್ಲೋರ್ಟೆನೋನ್ ಮತ್ತು ಸೈಕ್ಲೋಯುಕಲೆನಾಲ್ ಜೊತೆಗೆ ಆಲ್ಫಾ- ಮತ್ತು ಬೀಟಾ-ಅಮೈರಿನ್, ಬೀಟಾ-ಸಿಟೊಸ್ಟೆರಾಲ್, ಉರ್ಸೋಲಿಕ್ ಆಮ್ಲ, ಒಲಿಯಾನೊಲಿಕ್ ಆಮ್ಲ, ಮತ್ತು ಟೆರ್ಪೀನ್, ರೈಟಿಯಲ್ ಇರುತ್ತದೆ. ಎಲೆಗಳು ಬೀಟಾ-ಅಮಿರಿನ್ ಅನ್ನು ಹೊಂದಿರುತ್ತವೆ. ಕಾಂಡದ ತೊಗಟೆ ಬೀಟಾ-ಅಮೈರಿನ್, ಬೀಟಾ-ಸಿಟೊಸ್ಟೆರಾಲ್ ಮತ್ತು ಲುಪಿಯೋಲ್ ಹೊಂದಿರುತ್ತದೆ.
ಬೀಜಗಳು, ಎಲೆಗಳು ಮತ್ತು ಬೇರುಗಳು ನೇರಳೆ ಬಣ್ಣವನ್ನು ನೀಡುವ ಗ್ಲೂಕೋಸೈಡ್ ಅನ್ನು ಹೊಂದಿರುತ್ತವೆ.
ಹೂವುಗಳು 3-ಒ-ರಾಮ್ನೋಗ್ಲುಕೋಸೈಡ್ ಹೊಂದಿದೆ, ಇದು ಕ್ಯಾರೆಜಿನೆನ್-ಪ್ರೇರಿತ ಹಿಂಡ್ ಪಾವ್ ಊತದಲ್ಲಿ ಗಮನಾರ್ಹವಾದ ಉರಿಯೂತದ ಕಡಿಮೆಮಾಡುವ ಗುಣಲಕ್ಷಣಗಳನ್ನು ತೋರಿಸಿದೆ.
ರೈಟಿಯಾ ಟಿಂಕ್ಟೋರಿಯಾದ ಔಷಧೀಯ ಉಪಯೋಗಗಳು
- ಕೋಮಲ ಎಲೆಗಳ ರಸವನ್ನು ಕಾಮಾಲೆಯಲ್ಲಿ ಪರಿಣಾಮಕಾರಿಯಾಗಿ ಬಳಸಲಾಗುತ್ತದೆ.
- ಪುಡಿಮಾಡಿದ ತಾಜಾ ಎಲೆಗಳು, ಹುಳುಕು ಹಲ್ಲಿನ ಕುಳಿಯಲ್ಲಿ ತುಂಬಿದಾಗ ಹಲ್ಲುನೋವು ನಿವಾರಿಸುತ್ತದೆ.
- ಆಯುರ್ವೇದ ಮತ್ತು ಸಿದ್ಧ ಔಷಧಿ ಪದ್ದತಿಯಲ್ಲಿ ಸೋರಿಯಾಸಿಸ್ ಮತ್ತು ಇತರ ಚರ್ಮ ರೋಗಗಳಿಗೆ ಬಳಸಲಾಗುತ್ತದೆ.
- ತೊಗಟೆ ಮತ್ತು ಬೀಜಗಳನ್ನು ವಾಯು ಚಿಕಿತ್ಸೆಗಾಗಿ ಬಳಸಲಾಗುತ್ತದೆ.
- ಬೇರಿನ ತೊಗಟೆಯ ಸಾರವನ್ನು ಹಾವಿನ ಕಡಿತಕ್ಕೆ ಪ್ರತಿವಿಷವಾಗಿ ಮೌಖಿಕವಾಗಿ ಬಳಸಲಾಗುತ್ತದೆ.
- ತೊಗಟೆಯ ಪುಡಿಯನ್ನು ಮೂತ್ರಪಿಂಡದ ಕಲ್ಲುಗಳ ಚಿಕಿತ್ಸೆಗಾಗಿ ಬಳಸಲಾಗುತ್ತದೆ.
- ಕೂದಲಿನ ಎಣ್ಣೆಯನ್ನು ತಯಾರಿಸಲು ಸಸ್ಯವನ್ನು ಬಳಸಲಾಗುತ್ತದೆ, ಏಕೆಂದರೆ ಇದು ತಲೆಹೊಟ್ಟು ಮತ್ತು ಉರಿಯೂತವನ್ನು ಕಡಿಮೆಗೊಳಿಸುವ ಗುಣಗಳನ್ನು ಹೊಂದಿದೆ.
- ಅತಿಸಾರ ಮತ್ತು ರಕ್ತದೊತ್ತಡಕ್ಕೆ ರೈಟಿಯಾ ಟಿಂಕ್ಟೋರಿಯಾ ಅತ್ಯುತ್ತಮ ಔಷಧವಾಗಿದೆ.
- ಸಸ್ಯದ ತೊಗಟೆಯ ಕಷಾಯದೊಂದಿಗೆ ಶುಂಠಿಯನ್ನು ಬೆರೆಸಿ ಮೊಳೆರೋಗವನ್ನು ಗುಣಪಡಿಸಲು ಬಳಸಲಾಗುತ್ತದೆ.
- ಸಸ್ಯದ ತೊಗಟೆ ಹಸುವಿನ ಮೂತ್ರದೊಂದಿಗೆ ಬೆರೆಸಿ ಚರ್ಮದ ಮೇಲೆ ಹಚ್ಚುವುದರಿಂದ ಬಹಳ ಪರಿಣಾಮಕಾರಿ.
- ತೊಗಟೆಯ ತಾಜಾ ರಸವನ್ನು ಹಸುವಿನ ಹಾಲಿನೊಂದಿಗೆ ಬೆರೆಸಿ ಮೂತ್ರದ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ.
- ರುಮಟಾಯ್ಡ್ ಸಂಧಿವಾತ ಮತ್ತು ಅಸ್ಥಿಸಂಧಿವಾತದ ಚಿಕಿತ್ಸೆಯಲ್ಲಿ ಇದನ್ನು ಬಳಸಲಾಗುತ್ತದೆ.
- ಜ್ವರ, ಹಲ್ಲುನೋವು, ಮಲಬದ್ಧತೆ ಮತ್ತು ಹೊಟ್ಟೆ ನೋವುಗಳಿಗೆ ಇದು ಉತ್ತಮ ಪರಿಹಾರವಾಗಿದೆ.
- ಈ ಸಸ್ಯದ ಹಾಲನ್ನು ವಸಡುಗಳ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ.
ಸಂಶೋಧನೆಗಳು ಮತ್ತು ವೈಜ್ಞಾನಿಕ ಅಧ್ಯಯನಗಳು ರೈಟಿಯಾ ಟಿಂಕ್ಟೋರಿಯಾ ಈ ಕೆಳಗಿನ ಗುಣಗಳನ್ನು ಹೊಂದಿದೆ ಎಂದು ಹೇಳುತ್ತದೆ.
ಆಯುರ್ವೇದದ ಪ್ರಕಾರ ರಿಗ್ಟಿಯಾ ಟಿಂಕೋರಿಯಾದ ಗುಣಲಕ್ಷಣಗಳು
- ರಸ / ರುಚಿ: ತಿಕ್ತ (ಕಹಿ) ಕಷಾಯ (ಒಗರು)
- ಗುಣ / ಗುಣಗಳು: ಲಘು – ಹಗುರ , ರುಕ್ಷಾ – ಒಣಗಿಸುವಿಕೆ
- ವೀರ್ಯ / ಸಾಮರ್ಥ್ಯ: ಶೀತ – ಶೀತ
- ವಿಪಾಕ / ಜೀರ್ಣಾನಂತರದ ರುಚಿ: ಕಟು – ಕಾರ
ಆಯುರ್ವೇದದ ಪ್ರಕಾರ ರೈಟಿಯಾ ಟಿಂಕ್ಟೋರಿಯಾ ಹೇಗೆ ಕಾರ್ಯನಿರ್ವಹಿಸುತ್ತದೆ?
ಸ್ತ್ರೀ ಕುಟಜಾ ತನ್ನ ತಿಕ್ತ – ಕಶಾಯ ರಸಗಳು, ಲಘು- ರೂಕ್ಷ ಗುಣ ಮತ್ತು ಕಟು ವಿಪಾಕಗಳಿಂದಾಗಿ ಶೀತ ವೀರ್ಯದಿಂದ ಕಫ ದೋಷವನ್ನು ಸಮತೋಲನಗೊಳಿಸುತ್ತದೆ. ಸ್ತ್ರೀ ಕುಟಜಾ ಸೋರಿಯಾಸಿಸ್ ದದ್ದುಗಳ ಮೇಲೆ, ಸ್ರಾವಯುಕ್ತ ಸೋರಿಯಾಸಿಸ್ ಮತ್ತು ತೀವ್ರ ತುರಿಕೆಯೊಂದಿಗೆ ಕೂಡಿದ ಸೋರಿಯಾಯಸಿಸನ್ನು ನಿಯಂತ್ರಿಸುತ್ತದೆ.
ಸೋರಿಯಾಸಿಸ್ ತೈಲವನ್ನು (psoriasis oil) ಮನೆಯಲ್ಲಿಯೇ ತಯಾರಿಸುವುದು ಹೇಗೆ?
ಮೊದಲಿಗೆ, ನಿಮ್ಮ ನೆರೆಹೊರೆಯಲ್ಲಿ ರಿಗ್ಟಿಯಾ ಟಿಂಕ್ಟೋರಿಯಾದ ಮರವು ಕಾಣುವುದೇ ಎಂದು ನೋಡಿ. ರೈಟಿಯಾ ಟಿಂಕ್ಟೋರಿಯ ಮರವು ಸಾಮಾನ್ಯವಾಗಿ ಭಾರತದ ಎಲ್ಲಾ ಭಾಗಗಳಲ್ಲಿ ಬೆಳೆಯುತ್ತದೆ. ನೀವು ಈ ಮರವನ್ನು ಕಾಡುಗಳಲ್ಲಿ ಮತ್ತು ಹಳ್ಳಿಗಳಲ್ಲಿಯೂ ಕಾಣಬಹುದು. ರೈಟಿಯಾ ಟಿಂಕ್ಟೋರಿಯಾವನ್ನು ಅದರ ಹೂಬಿಡುವ ಋತುವಿನಲ್ಲಿ ಸುಲಭವಾಗಿ ಗುರುತಿಸಬಹುದು. ಮರವನ್ನು ಗುರುತಿಸುವಲ್ಲಿ ನಿಮಗೆ ಯಾವುದೇ ತೊಂದರೆ ಕಂಡುಬಂದರೆ, ನೀವಿರುವ ಜಾಗದ ಜನರಿಗೆ ರೈಟಿಯಾ ಟಿಂಕ್ಟೋರಿಯದ ಸ್ಥಳೀಯ ಹೆಸರು ಹೇಳಿದಲ್ಲಿ ಅವರು ಈ ಮರವನ್ನು ಗುರುತಿಸಲು ಸಹಾಯ ಮಾಡಬಲ್ಲರು.
ನೀವು ಮರವನ್ನು ಗುರುತಿಸಿದ ನಂತರ, ಮರದ ತಾಜಾ ಎಲೆಗಳನ್ನು ಎಣ್ಣೆಯ ತಯಾರಿಕೆಗೆ ಕುಯ್ಯಬೇಕು.(ಸಾಂಪ್ರದಾಯಕವಾಗಿ ಯಾವುದೇ ಕಬ್ಬಿಣದ ಉಪಕರಣಗಳನ್ನು ಬಳಸದೆ ಎಲೆಗಳನ್ನು ಸಂಗ್ರಹಿಸುವ ಅಭ್ಯಾಸವಿದೆ).
ಆಯುರ್ವೇದದಲ್ಲಿ ಅಥವಾ ಸಾಂಪ್ರದಾಯಿಕ ಗಿಡಮೂಲಿಕೆಗಳ ಎಣ್ಣೆಯನ್ನು ತಯಾರಿಸುವಾಗ, ಎಣ್ಣೆಯೊಂದಿಗೆ ಇತರೆ ಔಷಧಯುಕ್ತ ವಸ್ತುಗಳನ್ನು ಸೇರಿಸಿ ಕುದಿಸುತ್ತಾ ಎಣ್ಣೆಯನ್ನು ತಯಾರಿಸಲಾಗುತ್ತದೆ. ಅದರೆ ರೈಟಿಯಾ ಟಿಂಕ್ಟೋರಿಯಾ ತೈಲವನ್ನು ಬೆಂಕಿಯ ಉಪಯೋಗವಿಲ್ಲದೆಯೇ ತಯಾರಿಸಲಾಗುತ್ತದೆ.
ಅಗತ್ಯವಿರುವ ವಸ್ತುಗಳು:
- ರೈಟಿಯಾ ಟಿಂಕ್ಟೋರಿಯಾದ ತಾಜಾ ಎಲೆಗಳು – 1 ಕೆ.ಜಿ.
- ಗಾಣದಲ್ಲಿ ತಯಾರಿಸಿದ ತೆಂಗಿನ ಎಣ್ಣೆ – 1 ಲೀಟರ್
- ಗ್ಲಾಸ್ / ಸ್ಟೀಲ್ ಪಾತ್ರೆ – ಎಲೆಗಳು ಮತ್ತು ತೆಂಗಿನ ಎಣ್ಣೆ ಎರಡನ್ನೂ ಹಿಡಿದಿಡಲು ಸಾಕಾಗುವಷ್ಟು ದೊಡ್ಡದು.
ತಯಾರಿಕೆಯ ವಿಧಾನ
ಎಲೆಗಳನ್ನು ಸಾಕಷ್ಟು ಪ್ರಮಾಣದಲ್ಲಿ ಸಂಗ್ರಹಿಸಿದ ನಂತರ, ಕೊಳಕು ಮತ್ತು ಇನ್ನಾವುದೇ ಮಾಲಿನ್ಯವನ್ನು ತೆಗೆದುಹಾಕಲು ಎಲೆಗಳನ್ನು ಸ್ವಚ್ಛಗೊಳಿಸಲು ನೀರಿನಲ್ಲಿ ಸರಿಯಾಗಿ ತೊಳೆಯಬೇಕು. ಎಲೆಗಳು ಒಣಗಿದ ನಂತರ, ಅವುಗಳನ್ನು ಕೈಗಳಿಂದ ಹಿಚುಕಿ ಪಾತ್ರೆಗೆ ಸೇರಿಸಬೇಕು.
ನಂತರ ಸಮಾನ ಪ್ರಮಾಣದಲ್ಲಿ ತೆಂಗಿನ ಎಣ್ಣೆಯನ್ನು ಸೇರಿಸಬೇಕು. ಎಲೆಗಳನ್ನು ಸಂಪೂರ್ಣವಾಗಿ ಎಣ್ಣೆಯಲ್ಲಿ ಮುಳುಗಿರುವಿಕೆಯನ್ನು ಖಚಿತಪಡಿಸಿಕೊಂಡು ಹಗಲಿನ ಹೊತ್ತಿನಲ್ಲಿ ಸೂರ್ಯನ ಬೆಳಕು ತಾಗುವಂತೆ ಇಡಬೇಕು.
ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ, ಎಣ್ಣೆಯು ಎಲೆಗಳಲ್ಲಿರುವ ಔಷಧೀಯ ಗುಣಗಳನ್ನು ಕ್ರಮೇಣ ಹೀರಿಕೊಳ್ಳಲು ಪ್ರಾರಂಭಿಸುತ್ತದೆ. ಸಂಜೆ, ಪಾತ್ರೆಯನ್ನು ತೆರೆದ ಸ್ಥಳದಿಂದ ತೆಗೆದುಕೊಂಡು ಮನೆಯೊಳಗೆ ಅಥವಾ ಸುರಕ್ಷಿತವಾಗಿ ಜಾಗದಲ್ಲಿ ಪಾತ್ರೆಯ ಬಾಯಿಯನ್ನು ಬಟ್ಟೆ ಅಥವಾ ಮುಚ್ಚಳದಿಂದ ಮುಚ್ಚಿ ಇಡಬೇಕು.
ಈ ಪ್ರಕ್ರಿಯೆಯನ್ನು ಏಳು ದಿನಗಳವರೆಗೆ ನಿರಂತರವಾಗಿ ಮುಂದುವರಿಸಬೇಕಾಗಿದೆ. ಪ್ರತಿದಿನ ಎಣ್ಣೆಯನ್ನು ಚೆನ್ನಾಗಿ ತಿರುವಿ ಬೆರೆಸಬೇಕಾಗುತ್ತದೆ. ಪ್ರತಿದಿನ ಎಣ್ಣೆಯ ಬಣ್ಣ ಬದಲಾಗುತ್ತಿರುವುದನ್ನು ನೀವು ನೋಡಬಹುದು, ಎಣ್ಣೆಯು ಪ್ರಾರಂಭದ ಹಂತದಲ್ಲಿ ಪಾರದರ್ಶಕವಾಗಿದ್ದು ನಿಧಾನವಾಗಿ ಎಣ್ಣೆಯ ಬಣ್ಣವು ನೇರಳೆ ಮಿಶ್ರಿತ ಕಂದು ಬಣ್ಣಕ್ಕೆ ತಿರುಗುತ್ತದೆ. ಏಳು ದಿನಗಳ ಸೂರ್ಯನ ಬೆಳಕಿಗೆ ಒಡ್ಡುವಿಕೆಯು ಪೂರ್ಣಗೊಂಡ ನಂತರ ತೈಲವನ್ನು ಫಿಲ್ಟರ್ ಮಾಡಿ ಗಾಜಿನ ಬಾಟಲಿಯಲ್ಲಿ ಶೇಖರಿಸಿಡಬೇಕು. ಈಗ ಸೋರಿಯಾಯಾಸಿಸ್ ತೈಲವು (psoriasis oil) ಬಳಸಲು ಸಿದ್ದವಾಗಿರುತ್ತದೆ.
ಈ ತೈಲವನ್ನು ವೇಟ್ ಪಾಲೈ ತೈಲವೆಂದು (Vetpalai Thailam) , ಸೋರಿಯಾಸಿಸ್ ತೈಲವೆಂದೂ (psoriasis oil) ಕರೆಯುತ್ತಾರೆ.
ರೈಟಿಯಾ ಟಿಂಕ್ಟೋರಿಯಾ ತೈಲವನ್ನು ಬಳಸುವುದು ಹೇಗೆ ?
ರೈಟಿಯಾ ಟಿಂಕ್ಟೋರಿಯಾ ತೈಲವನ್ನು ದೇಹಕ್ಕೆ ಹಚ್ಚಲು ಬಳಸುತ್ತಾರೆ. ಉತ್ತಮ ಫಲಿತಾಂಶಗಳನ್ನು ಪಡೆಯಲು ಇದನ್ನು ದಿನಕ್ಕೆ ಎರಡು ಅಥವಾ ಮೂರು ಬಾರಿ ತಲೆ ಸೇರಿದಂತೆ ದೇಹದಾದ್ಯಂತ ಹಚ್ಚಬೇಕು.
ಸೂಚನೆ:
ರೈಟಿಯಾ ಟಿಂಕ್ಟೋರಿಯಾ ಎಣ್ಣೆಯನ್ನು ಗಾಣದ ತೆಂಗಿನ ಎಣ್ಣೆಯನ್ನು ಬಳಸಿ ತಯಾರಿಸಲಾಗುತ್ತದೆ, ಆದರೆ ಕೆಲವರು ತೆಂಗಿನ ಎಣ್ಣೆಯ ಬದಲು ಎಳ್ಳೆಣ್ಣೆಯನ್ನು ಕೂಡಾ ಬಳಸುತ್ತಾರೆ. ತಯಾರಿಕೆಯ ವಿಧಾನವು ಒಂದೇ ಆಗಿರುತ್ತದೆ ಮತ್ತು ತೈಲ ಮಾತ್ರ ವಿಭಿನ್ನವಾಗಿರುತ್ತದೆ.
ಒಂದು ಗಮನಾರ್ಹ ವ್ಯತ್ಯಾಸವೆಂದರೆ ತೆಂಗಿನಕಾಯಿ ಆಧಾರಿತ ಎಣ್ಣೆ ದೇಹವು ಶೀಘ್ರವಾಗಿ ಹೀರಿಕೊಂಡು ಚರ್ಮವು ಬೇಗ ಒಣಗುತ್ತದೆ, ಎಳ್ಳೆಣ್ಣೆಯ ಬಳಕೆಯು ಎಣ್ಣೆಯು ತೇವಾಂಶವನ್ನು ಹೆಚ್ಚು ಕಾಲ ಇಡುತ್ತದೆ. ಒಬ್ಬರು ಅತಿಯಾದ ಶುಷ್ಕತೆಯನ್ನು ಹೊಂದಿದ್ದರೆ, ಎಳ್ಳೆಣ್ಣೆ ಆಧಾರಿತ ರೈಟಿಯಾ ಟಿಂಕ್ಟೋರಿಯಾ ತೈಲವನ್ನು ಉಪಯೋಗಿಸುವುದು ಉತ್ತಮ.
ರೈಟಿಯಾ ಟಿಂಕ್ಟೋರಿಯಾ ತೈಲವನ್ನು ಸಾಮಾನ್ಯವಾಗಿ ಏಳು ದಿನಗಳಲ್ಲಿ ತಯಾರಿಸಲಾಗುತ್ತದೆ, ಆದರೆ ಕೆಲವು ಸ್ಥಳಗಳಲ್ಲಿ, ಈ ತೈಲವನ್ನು ತಯಾರಿಸಲು ಬಳಸುವ ದಿನಗಳ ಸಂಖ್ಯೆ 3 ರಿಂದ 14 ದಿನಗಳವರೆಗೆ ಬದಲಾಗಬಹುದು.
ಬಳಕೆಯ ವಿಧಾನ
ರೈಟಿಯಾ ಟಿಂಕ್ಟೋರಿಯಾ ಆಯಿಲ್ ಅನ್ನು ತಲೆ ಸೇರಿದಂತೆ ದೇಹದಾದ್ಯಂತ ಹಚ್ಚಲು ಬಳಸಲಾಗುತ್ತದೆ.
ಅಡ್ಡ ಪರಿಣಾಮಗಳು
ರೈಟಿಯಾ ಟಿಂಕ್ಟೋರಿಯಾ ತೈಲವನ್ನು ನಿರಂತರ ಬಳಸುವಿಕೆಯಿಂದ ಗೊತ್ತಾಗಿರುವಂತಹ ಯಾವುದೇ ಅಡ್ಡಪರಿಣಾಮಗಳಿಲ್ಲ. ಆದರೂ ನೀವು ಯಾವುದೇ ಅನುಚಿತ ಪ್ರತಿಕ್ರಿಯೆಯನ್ನು ಕಂಡುಕೊಂಡರೆ ಬಳಕೆಯನ್ನು ನಿಲ್ಲಿಸಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಕೊನೆಯ ಮಾತುಗಳು :
ಸೋರಿಯಾಸಿಸ್ ಚಿಕಿತ್ಸೆಯು ರೋಗದ ಪದೇಪದೇ ಮರುಕಳಿಕೆ , ಧೀರ್ಘ ಕಾಲದ ಚಿಕಿತ್ಸೆಯ ಅವಧಿಯಿಂದ ವ್ಯಕ್ತಿಯ ಮೇಲೆ ಆರ್ಥಿಕ ಹೊರೆ ಉಂಟುಮಾಡುತ್ತದೆ. ಅನೇಕ ಸೋರಿಯಾಸಿಸ್ ರೋಗಿಗಳು ನಿಗದಿತ ಔಷಧಿಗಳನ್ನು ಆರ್ಥಿಕ ಕಾರಣದಿಂದ ಅವುಗಳನ್ನು ಮುಂದುವರಿಸುವುದಿಲ್ಲ. ಇದರಿಂದ ಸೋರಿಯಾಯಸಿಸ್ ರೋಗವು ಹೆಚ್ಚಾಗಿ ರೋಗಿಗೆ ಮತ್ತಷ್ಟು ಕಷ್ಟವಾಗಬಹುದು.
ಇಂತಹ ಪರಿಸ್ಥಿತಿಯಲ್ಲಿ ಕಡಿಮೆ ವೆಚ್ಚದ ಸೋರಿಯಾಯಸ್ ತೊಂದರೆಯನ್ನು ಸಮರ್ಥವಾಗಿ ಹತೋಟಿ ತರಬಲ್ಲ ಔಷಧಯುಕ್ತ ಎಣ್ಣೆಯನ್ನು ಮನೆಯಲ್ಲಿಯೇ ತಯಾರಿಸಿದರೆ ರೋಗಿಗಳಿಗೆ ಬಹಳ ಪ್ರಯೋಜನಕಾರಿ. ಅಂತಹ ಔಷಧಯುಕ್ತವಾದ ತೈಲವನ್ನು ರೈಟಿಯಾ ಟಿಂಕ್ಟೋರಿಯಾದ ಎಲೆಗಳನ್ನು ಬಳಸಿ ತಯಾರಿಸಬಹುದು.
ಇದು ನಿಮ್ಮ ಸೋರಿಯಾಸಿಸ್ ಅನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ಶುಷ್ಕತೆ, ತುರಿಕೆ ಮತ್ತು ಚರ್ಮದ ಬಿರುಕುಗಳನ್ನು ತಡೆಯುತ್ತದೆ. ಸೋರಿಯಾಸಿಸ್ ಚಿಕಿತ್ಸೆಗೆ ಮಾರುಕಟ್ಟೆಯಲ್ಲಿ ಹಲವಾರು ತೈಲಗಳು ಲಭ್ಯವಿದ್ದು, ರೈಟಿಯಾ ಟಿಂಕ್ಟೋರಿಯಾವು ಅವುಗಳಲ್ಲಿ ಒಂದು ಪ್ರಮುಖ ಔಷಧಿಯಾಗಿರುತ್ತದೆ.
ನಿಮಗೆ ಮೇಲೆ ತಿಳಿಸಿದ ತೈಲವನ್ನು ಮನೆಯಲ್ಲಿ ಮಾಡಲು ಸಾಧ್ಯವಾಗದಿದ್ದಲ್ಲಿ ನೀವು ಮಾರುಕಟ್ಟೆಯಲ್ಲಿ ದೊರೆಯುವ ರೈಟಿಯಾ ಟಿಂಕ್ಟೋರಿಯಾದ ತೈಲವನ್ನು ಖರೀದಿಸಿ ಬಳಸಬಹುದು.
ಉಲ್ಲೇಖ :
- http://apps.worldagroforestry.org/treedb/AFTPDFS/Wrightia_tinctoria.PDF
- https://www.researchgate.net/profile/Sathianarayanan-S/publication/267822780_Immunomodulatory_activity_of_ethanolic_extract_of_wrightia_tinctoria_leaves/links/5a5743fcaca272bb69648fe4/Immunomodulatory-activity-of-ethanolic-extract-of-wrightia-tinctoria-leaves.pdf
- https://www.researchgate.net/publication/317557036_Deciphering_the_Mechanism_of_Action_of_Wrightia_tinctoria_for_Psoriasis_Based_on_Systems_Pharmacology_Approach
- https://www.longdom.org/open-access/chemical-investigation-of-wrightia-tinctoria-2329-6836-1000296.pdf
- https://sites.google.com/site/efloraofindia/species/a—l/a/apocynaceae/wrightia/wrightia-tinctoria
- https://www.researchgate.net/publication/236681886_Evaluation_of_Anti-inflammatory_and_Analgesic_Activity_of_Wrightia_Tinctoria_Leaves
- International Journal of Pharmacy and Pharmaceutical Sciences ISSN- 0975-1491 Vol 6, Issue 7, 2014
- International Journal of Ayurveda and Pharma Research Review Article PROMISING AYURVEDIC HERBS IN THE MANAGEMENT OF KITIBHA (PSORIASIS)- A REVIEW -IJAPR | January 2018 | Vol 6 | Issue 1
- http://envis.frlht.org/plantdetails/2239/e5db72ea4bdd02657ec3b71a1dd490bd
- http://apps.worldagroforestry.org/treedb/AFTPDFS/Wrightia_tinctoria.PDF
- https://www.longdom.org/open-access/chemical-investigation-of-wrightia-tinctoria-2329-6836-1000296.pdf
- http://www.phcogrev.com/article/2014/8/15/1041030973-7847125528
- Khare C. (2007) Wrightia tinctoria R. Br.. In: Khare C. (eds) Indian Medicinal Plants. Springer, New York, NY. https://doi.org/10.1007/978-0-387-70638-2_1777
- Jesy EJ and Jose B: Antitumour and antioxidant activity of Wrightia tinctoria (roxb.) R. br. leaf oil. Int J Pharm Sci Res 2017; 8(11): 4899-03.doi: 10.13040/IJPSR.0975-8232.8(11).4899-03.
- https://www.researchgate.net/publication/332250334_PHYTOCHEMICAL_AND_PHARMACOLOGICAL_STUDIES_ON_WRIGHTIA_TINCTORIA
- https://pubmed.ncbi.nlm.nih.gov/28604055/