ಸೋರಿಯಾಸಿಸ್ ಲಕ್ಷಣಗಳು, ವಿಧಗಳು ಮತ್ತು ಚಿಕಿತ್ಸೆ
ಸೋರಿಯಾಸಿಸ್ ಒಂದು ದೀರ್ಘಕಾಲದ, ಸಾಂಕ್ರಾಮಿಕವಲ್ಲದ, ರೋಗನಿರೋಧಕ ಶಕ್ತಿಯ ವೈಪರೀತ್ಯದಿಂದ ಉಂಟಾಗುವ, ಉರಿಯೂತದ (inflammation) ಚರ್ಮದ ತೊಂದರೆಯಾಗಿದೆ. ಇದು ಮುಖ್ಯವಾಗಿ ಚರ್ಮದ ಎಪಿಡರ್ಮಲ್ ಕೋಶಗಳ ಪದರವನ್ನು ಬಾಧಿಸುತ್ತದೆ ಮತ್ತು ಚರ್ಮ ಕೋಶಗಳ ಉತ್ಪಾದನೆಯನ್ನು ಅನಿಯಮಿತವಾಗಿ ಹೆಚ್ಚಿಸುತ್ತದೆ. ಸಾಮಾನ್ಯವಾಗಿ ಇದು ತುರಿಕೆ, ಗಂದೆ ರೂಪದ ಚರ್ಮ ವ್ಯಾಧಿಯಾಗಿದ್ದು, ಬೆಳ್ಳಿಯ ಪದರಗಳ ರೂಪದಲ್ಲಿ ಚರ್ಮದ ನಿರ್ಜೀವ ಕೋಶಗಳು ಶೇಖರಣೆಗೊಂಡು ನಿರಂತರವಾಗಿ ಚಕ್ಕೆಗಳ ರೂಪದಲ್ಲಿ ಬೀಳುತ್ತಿರುತ್ತದೆ. ಸೋರಿಯಾಸಿಸ್ ರೋಗಿಗಳಲ್ಲಿನ ರೋಗಲಕ್ಷಣಗಳು ಪ್ರತಿ ರೋಗಿಗಳಿಗೆ ವ್ಯತ್ಯಾಸಗೊಳ್ಳುತ್ತದೆ ಹಾಗೂ ರೋಗದ ತೀವ್ರತೆಯು ರೋಗದ ಮರುಕಳಿಸುವಿಕೆಯ ಹಾಗೂ ಹೆಚ್ಚುವಿಕೆ ಮೇಲೆ ನಿರ್ಧಾರವಾಗಿರುತ್ತದೆ. ಸೋರಿಯಾಸಿಸ್ ಕೇವಲ ದೈಹಿಕವಾಗಿ ಮಾತ್ರವಲ್ಲದೆ ರೋಗಿಯ ಭಾವನಾತ್ಮಕ ಹಾಗೂ ಮಾನಸಿಕ ಸ್ವಾಸ್ಥ್ಯದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಸೋರಿಯಾಸಿಸ್ ಚಿಕಿತ್ಸೆಯಲ್ಲಿ ವಿವಿಧ ರೀತಿಯ ದೇಹಕ್ಕೆ ಹಚ್ಚುವ ಹಾಗೂ ಒಳಗೆ ಸೇವಿಸುವ ಔಷಧಿಗಳನ್ನು ಮತ್ತು ಅಲ್ಟ್ರಾ ವೈಲೆಟ್ ಲೈಟ್ ಚಿಕಿತ್ಸೆಯನ್ನೂ ಬಳಸುತ್ತಾರೆ.
ಸಾಂಕ್ರಾಮಿಕ ರೋಗಶಾಸ್ತ್ರ(Epidemiology)
ಸೋರಿಯಾಸಿಸ್ ಸಾಮಾನ್ಯ ಚರ್ಮರೋಗದ ಕಾಯಿಲೆಗಳಲ್ಲಿ ಒಂದಾಗಿದೆ, ಇಂದು ಇದು ವಿಶ್ವದ ಸುಮಾರು ಶೇಕಡ 2 ರಿಂದ 4 ರಷ್ಟು ಜನರಲ್ಲಿ ಕಂಡು ಬರುವುದೆಂದು ಅಂದಾಜಿಸಲಾಗಿದೆ. ಸಮಭಾಜಕ ವೃತ್ತಕ್ಕೆ ಹತ್ತಿರವಿರುವ ದೇಶಗಳಿಗೆ ಹೋಲಿಸಿದರೆ ಯುರೋಪ್ ಮತ್ತು ಆಸ್ಟ್ರೇಲಿಯಾದಂತಹ ಸಮಭಾಜಕದಿಂದ ಹೆಚ್ಚು ದೂರದಲ್ಲಿರುವ ದೇಶಗಳಲ್ಲಿ ಇದು ಹೆಚ್ಚು ಪ್ರಚಲಿತದಲ್ಲಿದೆ ಎಂದು ಕಂಡುಬರುತ್ತದೆ . ಸೋರಿಯಾಸಿಸ್ ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದಾದರೂ, ವಿಶ್ವಾದ್ಯಂತ ಮಕ್ಕಳೊಂದಿಗೆ ಹೋಲಿಸಿದರೆ ವಯಸ್ಕರಲ್ಲಿ ಈ ರೋಗ ಕಂಡುಬರುವ ಸಂಭವ ಹೆಚ್ಚು. ರೋಗದ ತೀವ್ರತೆಗೆ ಅನುಸಾರವಾಗಿ ಇದನ್ನು
- ನಲುವತ್ತು (<40) ವರ್ಷಗಳ ಕೆಳಗಿನವರಲ್ಲಿ ಹಾಗೂ
- ನಲವತ್ತು ವರ್ಷಗಳು (>40) ಮೇಲಿನವರಲ್ಲಿ ಎಂದು ಎರಡು ವಿಭಾಗವಾಗಿ ವರ್ಗೀಕರಿಸಲಾಗಿದೆ.
ಇದನ್ನು ಕ್ರಮವಾಗಿ ಟೈಪ್ I ಸೋರಿಯಾಸಿಸ್ ಮತ್ತು ಟೈಪ್ II ಸೋರಿಯಾಸಿಸ್ ಎಂದು ವರ್ಗೀಕರಿಸಲಾಗಿದೆ.
ಶೇಕಡ 75 ಕ್ಕಿಂತ ಹೆಚ್ಚು ಸೋರಿಯಾಸಿಸ್ ಪ್ರಕರಣಗಳು ಟೈಪ್ I ವಿಭಾಗದಲ್ಲಿ ಕಂಡುಬರುತ್ತದೆ.ಇದು ಗಂಡು ಹಾಗೂ ಹೆಣ್ಣೆಂಬ ಭೇದವಿಲ್ಲದೆ ಪುರುಷರು ಹಾಗೂ ಮಹಿಳೆಯರಲ್ಲಿ ಸಮಾನವಾಗಿ ಕಂಡುಬರುತ್ತದೆ.
ಸೋರಿಯಾಸಿನ್ನ ವಿಧಗಳು (Psoriasis types)
ಸೋರಿಯಾಸಿಸ್ ರೋಗವನ್ನು ಅವುಗಳ ಗುಣಲಕ್ಷಣಗಳಿಗೆ ಅನುಗುಣವಾಗಿ ವಿಂಗಡಿಸಲಾಗಿದೆ ಈ ರೀತಿಯ ವರ್ಗೀಕರಣ ಸೋರಿಯಾಸಿಸ್ಗೆ ಚಿಕಿತ್ಸಾ ವಿಧಾನಗಳನ್ನು ನಿರ್ಧರಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತವೆ.
ಪ್ಲೇಕ್ ಸೋರಿಯಾಸಿಸ್ (Plaque psoriasis)

ನಮಗೆ ಸಾಮಾನ್ಯವಾಗಿ ಕಂಡುಬರುವ ಸೋರಿಯಾಸಿಸ್ ರೋಗಿಗಳಲ್ಲಿ ಶೇಕಡ 90ರಷ್ಟು ರೋಗಿಗಳು ಪ್ಲೇಕ್ ಸೋರಿಯಾಸಿಸ್ ಎಂಬ ವಿಧವಾದ ಸೋರಿಯಾಸಿಸ್ನಿಂದ ಬಳಲುತ್ತಿರುತ್ತಾರೆ ಇದನ್ನು ಸೋರಿಯಾಸಿಸ್ ವಲ್ಗ್ಯಾರಿಸ್ ಎಂದೂ ಕರೆಯುತ್ತಾರೆ. ಪ್ಲೇಕ್-ಮಾದರಿಯ ಸೋರಿಯಾಸಿಸ್ನಲ್ಲಿ ಬಿಳಿಯ ಹೊಟ್ಟಿನಂತ ಪದರಗಳುಳ್ಳ ಕೆಂಪು ಕಲೆಗಳಾಗುತ್ತವೆ. ಇವು ಸಾಮಾನ್ಯವಾಗಿ ವೃತ್ತಾಕಾರದಲ್ಲಿ ಅಥವಾ ನಿರ್ದಿಷ್ಟ ಅಂಚುಗಳುಳ್ಳ ದಪ್ಪ ಕಲೆಗಳಾದ ಇವು ಸಾಮಾನ್ಯವಾಗಿ ಮೊಣಕೈಗಳು ಮೊಣಕಾಲುಗಳು, ದೇಹದ ಹಿಂಭಾಗ, ತಲೆ ಮೊದಲಾದ ಒತ್ತಡದ ಪ್ರದೇಶಗಳಲ್ಲಿ ಆಗುತ್ತದವೆ. ಮೈಯಲ್ಲಿ ಎಲ್ಲಾದರೂ ಆಗಬಹುದಾದ ಇವು ತಲೆಯ ಚರ್ಮ, ಉಗುರುಗಳು, ಅಂಗೈ, ಅಂಗಾಲುಗಳು, ಜನನಾಂಗಗಳ ಪ್ರದೇಶ, ಕಂಕುಳು ಮುಂತಾದ ಚರ್ಮಮಡಿಕೆಗಳ ಪ್ರದೇಶದಲ್ಲೂ ಆಗಬಹುದು. ಉಗುರಿನಲ್ಲಿ ಇದು ತೂತುಗಳು, ಉಗುರ ತುದಿಯ ಕೆಳಗಿನ ಒರಟು ಕಲೆಗಳು, ಉಗುರು ಕಿತ್ತು ಬರುವುದು, ಉಗುರಿನ ಕೆಳಭಾಗದಿಂದ ಬಿಳಿಯ ಅಥವಾ ಹಳದಿ ಮಿಶ್ರಿತ ಚರ್ಮದ ಚಕ್ಕೆಗಳ ಉದುರುವಿಕೆ ಮುಂತಾದ ಲಕ್ಷಣಗಳಾಗಿ ಕಂಡುಬರುತ್ತದೆ. ಮೈಯಲ್ಲಿನ ಸೋರಿಯಾಸಿಸ್ ಕೆಲವೊಮ್ಮೆ ತೀವ್ರ ತುರಿಕೆಯಿಂದ ಕೂಡಿರುತ್ತದೆ. ಪ್ಲೇಕ್ ಸೋರಿಯಾಸಿಸ್ ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳಬಹುದು. ಪ್ಲೇಕ್ ಸೋರಿಯಾಟಿಕ್ ಗಂದೆಗಳನ್ನು ಗಾತ್ರಗಳ ಆಧಾರದ ಮೇಲೆ ಎರಡು ಉಪವಿಭಾಗಗಳಾಗಿ ವಿಂಗಡಿಸಲಾಗಿದೆ, ಅವುಗಳು ಯಾವುದೆಂದರೆ
- ದೊಡ್ಡ ಪ್ಲೇಕ್ ಸೋರಿಯಾಸಿಸ್ – large plaque psoriasis (> 3 ಸೆಂ.ಮೀ)
ಇಲ್ಲಿ ಸಾಮಾನ್ಯವಾಗಿ ಮೂರು ಸೆಂಟಿಮೀಟರ್ಗಿಂತ ಅಗಲವಾದ, ನಿರ್ದಿಷ್ಟ ಅಂಚುಗಳಿಂದ ಹಾಗು ದಪ್ಪ ಗಾತ್ರದ ದದ್ದುಗಳು ಹಾಗು ಬೆಳ್ಳಿಯ ಬಣ್ಣದ ಚಕ್ಕೆಗಳಿಂದ ಕಂಡು ಬರುತ್ತದೆ . - ಸಣ್ಣ ಪ್ಲೇಕ್ ಸೋರಿಯಾಸಿಸ್ – small plaque psoriasis (<3 ಸೆಂ.ಮೀ.)
ಇದು ತೆಳುವಾದ ದದ್ದುಗಳನ್ನು ಹೊಂದಿರುವ ಹಾಗು ನಿರ್ದಿಷ್ಟ ಹಾಗು ಅನಿರ್ದಿಷ್ಟ ಅಂಚುಗಳಿಂದ ಕೂಡಿದ್ದು ಚಿಕ್ಕದಾದ ಬೆಳ್ಳಿಯ ಬಣ್ಣದ ಚಕ್ಕೆಗಳಿಂದ ಕೂಡಿರುತ್ತದೆ.
ಸೋರಿಯಾಸಿಸ್ ಚಕ್ಕೆಗಳನ್ನು ಕೆರೆದಲ್ಲಿ ಮೊದಲಿಗೆ ಬೆಳ್ಳಿಯ ಬಣ್ಣದ ಚಕ್ಕೆಗಳು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ಮತ್ತಷ್ಟು ಕೆರೆದಲ್ಲಿ ಕೆಂಪು ವರ್ಣದ ಹಿನ್ನಲೆಯಲ್ಲಿ ಸೂಜಿಮೊನೆ ಗಾತ್ರದಲ್ಲಿ ಸಣ್ಣ ಸಣ್ಣ ರಕ್ತಸ್ರಾವವಾಗುವ ಜಾಗಗಳು ಕಾಣಿಸಿಕೊಳ್ಳುತ್ತದೆ. ಈ ವಿದ್ಯಮಾನವನ್ನು “ಆಸ್ಪಿಟ್ಜ್ ಚಿಹ್ನೆ” (Auspitz sign) ಎಂದು ಕರೆಯಲಾಗುತ್ತದೆ. ಈ ಕೆಂಪು ಪಿನ್‌ಪಾಯಿಂಟ್‌ಗಳು ಪ್ಯಾಪಿಲೋಮಟೋಸಿಸ್ನ ಸುಳಿವನ್ನು ಡರ್ಮಲ್ ಪ್ಯಾಪಿಲ್ಲೆಯ ತುದಿಗಳಲ್ಲಿ ಸೂಚಿಸುತ್ತವೆ. ಬಾಹ್ಯವಾಗಿ ವಿಸ್ತರಿಸುವ ಸೋರಿಯಾಟಿಕ್ ಪ್ಲೇಕ್‌ಗಳು ವಿವಿಧ ರೀತಿಯ ಆಯಾಮಗಳಲ್ಲಿ ಕಂಡುಬರಬಹುದು ಉದಾಹರಣೆಗಾಗಿ ಸೋರಿಯಾಸಿಸ್ ಗೈರಾಟಾ (psoriasis gyrata). ಇಲ್ಲಿ ಮುಖ್ಯವಾಗಿ ಬಾಗಿದ ರೇಖೀಯ ಮಾದರಿಗಳೊಂದಿಗೆ ವಿಭಿನ್ನ ಸಂರಚನೆಗಳನ್ನು ಪಡೆದುಕೊಳ್ಳಬಹುದು, ಅನ್ಯೂಲಾರ್ ಸೋರಿಯಾಸಿಸ್ (annular psoriasis) ವೃತ್ತಾಕಾರದ ಕಲೆಗಳಾಗಿ ಮಧ್ಯದ ಭಾಗದಲ್ಲಿ ಸಾಮಾನ್ಯ ಚರ್ಮದ ಲಕ್ಷಣಗಳನ್ನು ಹೊಂದಿರುತ್ತದೆ.
ಸೋರಿಯಾಸಿಸ್ ಫೋಲಿಕ್ಯುಲಾರಿಸ್ (psoriasis follicularis) ಎಂಬ ವಿಧವು ಪೈಲೊಸೆಬೆಸಿಯೋಸಿಸ್ ಕೋಶಗಳ ತುದಿಯಲ್ಲಿ ಚಕ್ಕೆಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ. ವಾಸಿಯಾಗುತ್ತಿರುವ ಸೋರಿಯಾಸಿಸ್ ಕಲೆಗಳು ಬಿಳಿಯ ವೃತ್ತಾಕಾರದ ಬಳೆಗಳ ರೂಪದಲ್ಲಿ ಕಂಡುಬರುತ್ತದೆ. ಇದನ್ನು “ವೊರೊನ್ಫ್ ರಿಂಗ್”(Woronff ring)ಎಂದು ಕರೆಯುತ್ತಾರೆ. ಇದು ಪ್ರೋಸ್ಟಗ್ಲಾಂಡಿನ್ ಎಂಬ ರಾಸಾಯನಿಕ ದ್ರವ್ಯದ ಕುಸಿತದ ಕಾರಣದಿಂದ ಎಂದು ಹೇಳಲಾಗಿದೆ.
ಪಾಮೋಪ್ಲಾಂಟರ್ ಸೋರಿಯಾಸಿಸ್ (Palmoplantar psoriasis)

ಇದು ಅಂಗೈ ಹಾಗೂ ಅಂಗಾಲುಗಳಲ್ಲಿ ಕಂಡುಬರುವಂತ ಒಂದು ಸೋರಿಯಾಸಿಸ್ನ ವಿಧವಾಗಿದೆ. ಇದು ಪ್ಲೇಕ್ ಸೋರಿಯಾಸಿಸ್ನ ತರಹ ಅಂಗೈ ಹಾಗೂ ಅಂಗಾಲು ಗಳಲ್ಲಿ ಮಾತ್ರ ಒರಟಾದ ಹೊಟ್ಟಿನಂತ ಪದರಗಳುಳ್ಳ ದಪ್ಪ ದಪ್ಪ ಕಲೆಗಳಾಗುತ್ತವೆ. ಸಾಮಾನ್ಯವಾಗಿ ಇವು ತೀವ್ರವಾದ ತುರಿಕೆಯಿಂದ ಕೂಡಿದ್ದು ಕೆಲಮೊಮ್ಮೆ ತುರಿಕೆ ರಹಿತವಾಗಿಯೂ ಕಾಣಿಸಿಕೊಳ್ಳಬಹುದು.
ಗುಟ್ಟೇಟ್ ಸೋರಿಯಾಸಿಸ್ (Guttate Psoriasis)

ಗಟ್ಟೇಟ್ ಎಂಬ ಪದವನ್ನು “ಗಟ್ಟಾ” ಎಂಬ ಗ್ರೀಕ್ ಪದದಿಂದ ಪಡೆಯಲಾಗಿದೆ, ಇಲ್ಲಿ ಗಟ್ಟಾ ಎಂದರೆ “ಹನಿ” ಎಂದು ಅರ್ಥ. ಗಟ್ಟೇಟ್ ಸೋರಿಯಾಸಿಸ್ ಒಂದು ಅಪರೂಪದ ಸೋರಿಯಾಸಿಸ್ ಪ್ರಭೇದವಾಗಿದ್ದು ಶೇಕಡಾ 2% ರಷ್ಟು ಸೋರಿಯಾಸಿಸ್ ಹೊಂದಿರುವ ರೋಗಿಗಳಲ್ಲಿ ಕಂಡುಬರುತ್ತದೆ. ಇದು ಸಾಮಾನ್ಯವಾಗಿ ಮಕ್ಕಳು ಮತ್ತು ಯುವ ವಯಸ್ಕರಲ್ಲಿ ಕಂಡುಬರುತ್ತದೆ, ಇದು ಹೆಚ್ಚಾಗಿ ಗ್ರೂಪ್ ಬಿ ಬೀಟಾ-ಹೆಮೋಲಿಟಿಕ್ ಸ್ಟ್ರೆಪ್ಟೋಕೊಕಿ ಎಂಬ ಬ್ಯಾಕ್ಟೀರಿಯದಿಂದ ಉಂಟಾಗುವ ಮೇಲ್ಭಾಗದ ಶ್ವಾಸೇಂದ್ರಿಯ ಪ್ರದೇಶದ ಸೋಂಕಿನ ನಂತರ 2 ರಿಂದ 4 ನೇ ವಾರಗಳಲ್ಲಿ ಕಂಡುಬರುತ್ತದೆ. ರೋಗಿಗಳು ಇಲ್ಲಿ ಆಂಟಿಸ್ಟ್ರೆಪ್ಟೋಲಿಸಿನ್ ಎಂಬ ರಾಸಾಯನಿಕಗಳ ಹೆಚ್ಚಾಗುವಿಕೆಯನ್ನೂ ಸಹ ತೋರಿಸಬಹುದು. ಮಕ್ಕಳಲ್ಲಿ ಸ್ಟ್ರೆಪ್ಟೋಕೊಕಲ್ ಪೆರಿಯಾನಲ್ ಡರ್ಮಟೈಟಿಸ್ ಎಂಬ ಲಕ್ಷಣಗಳು ಕಂಡುಬರಬಹುದು. ಹೆಸರೇ ಸೂಚಿಸುವಂತೆ, ಗುಟ್ಟೇಟ್ ಸೋರಿಯಾಸಿಸ್ನಲ್ಲಿನ ಗಾಯಗಳು ತೀವ್ರವಾಗಿ ಹೆಚ್ಚಾಗುವಿಕೆ ಕಂಡುಬರುತ್ತವೆ, ಅದಲ್ಲದೆ ಇವು ಏಕರೂಪದ ಸಣ್ಣ ಹನಿಗಳಂತೆ ಉಬ್ಬಿದ ಕಲೆಗಳಾಗಿ ಅಥವಾ ದದ್ದುಗಳ ರೂಪದಲ್ಲಿ ಬಹಳಷ್ಟು ಕಾಣಿಸಿಕೊಳ್ಳುತ್ತದೆ. ಗಟ್ಟೇಟ್ ಸೋರಿಯಾಸಿಸ್ ಸಾಮಾನ್ಯವಾಗಿ ದೇಹದೆಲ್ಲೆಡೆ ಕಾಣಿಸಿಕೊಳ್ಳಬಹುದು ಹಾಗು ಇವು ಕೈಗಳು, ಎದೆ, ಬೆನ್ನು, ಹೊಟ್ಟೆ, ಸೊಂಟದ ಭಾಗಗಳಲ್ಲಿ ಕಾಣಿಸಿಕೊಂಡು ದೇಹದ ಮದ್ಯಭಾಗದತ್ತ ಹರಡುವುದನ್ನು ಗಮನಿಸಬಹುದು. ಗಾಯಗಳ ಸಾಮಾನ್ಯೀಕೃತ ವಿತರಣೆ ಇರಬಹುದು, ಹೆಚ್ಚಿನ ಸಂದರ್ಭಗಳಲ್ಲಿ, ಗುಟ್ಟೇಟ್ ಸೋರಿಯಾಸಿಸ್ 3-4 ತಿಂಗಳುಗಳಲ್ಲಿ ಸ್ವಯಂ-ಸೀಮಿತಗೊಳ್ಳುವ ಕಾಯಿಲೆಯಾಗಿದೆ. ಆದರೆ ಕೆಲವೊಮ್ಮೆ ಇದು ಹೆಚ್ಚು ಸಂಕೀರ್ಣಗೊಂಡು ಪ್ಲೇಕ್ ಸೋರಿಯಾಸಿಗೆ ಮಾರ್ಪಾಡು ಹೊಂದಿ ಚಿಕಿತ್ಸೆಗೆ ಕಷ್ಟಸಾಧ್ಯವಾಗಬಹುದು.
ಇನ್ವರ್ಸ್ ಸೋರಿಯಾಸಿಸ್ (Inverse psoriasis)

ಕೆಲವೊಮ್ಮೆ ಸೋರಿಯಾಸಿಸ್ ದೇಹದ ಮಡಿಕೆ ಅಥವಾ ಸಂದುಗಳಲ್ಲಿ ಕಂಡುಬರುತ್ತದೆ. ಇದನ್ನು ಫ್ಲೆಕ್ಷುರಲ್ ಅಥವಾ ಇನ್ವೆರ್ಸ್ ಸೋರಿಯಾಸಿಸೆಂದು ಕರೆಯುತ್ತಾರೆ. ಈ ವಿಧವಾದ ಸೋರಿಯಾಯಾಸಿಸ್ ಹೆಚ್ಚಾಗಿ ಅತಿಯಾದ ಬೊಜ್ಜು ಹೊಂದಿರುವ ವ್ಯಕ್ತಿಗಳಲ್ಲಿ ಕಂಡುಬರುತ್ತದೆ. ಇನ್ವರ್ಸ್ ಸೋರಿಯಾಸಿಸ್ ಹೆಚ್ಚಾಗಿ ಚರ್ಮದ ಮಡಿಕೆಗಳಲ್ಲಿ ಅಥವಾ ಚರ್ಮಗಳ ಕೂಡುವಿಕೆಯ ಜಾಗಗಳಾದ ಕಂಕುಳು, ತೊಡೆಸಂದಿ, ಗುದಪ್ರದೇಶ, ಸ್ತನಪ್ರದೇಶದ ಕೆಳಗೆ ಕಂಡುಬರುತ್ತದೆ. ಇಲ್ಲಿ ಸೋರಿಯಾಸಿಸ್ ಕಲೆಗಳು ಕೆಂಪಾಗಿ, ಸಮ್ಮಿತೀಯವಾಗಿ, ಬಹಳ ಸ್ಪಷ್ಟವಾಗಿ ಕಂಡುಬರುವ, ಬಿರುಕುಗಳಿಂದ ಕೂಡಿರುವ ಚಕ್ಕೆಗಳಿಂದ ಕೂಡಿದ್ದು ಈ ಜಾಗಗಳ ಪದೇಪದೇ ತಿಕ್ಕುವಿಕೆ ಹಾಗು ತೇವಾಂಶದಿಂದ ನಿರ್ಜೀವ ಚರ್ಮಕೋಶಗಳ ಉದುರುವಿಕೆ ಬಹಳಷ್ಟು ಕಡಿಮೆ ಕಂಡುಬರುತ್ತದೆ. ಇನ್ವರ್ಸ್ ಸೋರಿಯಾಸಿಸ್ ಸಾಮಾನ್ಯ ಸೋರಿಯಾಸಿಸ್ ಚಿಕಿತ್ಸಾ ವಿಧಾನಗಳಿಗೆ ಸ್ಪಂದಿಸದೇ ಚಿಕಿತ್ಸೆಯನ್ನು ಕ್ಲಿಷ್ಟಕರವಾಗಿಸುತ್ತದೆ.
ಎರಿಥ್ರೋಡರ್ಮಿಕ್ ಸೋರಿಯಾಸಿಸ್ (Erythrodermic psoriasis)

ಎರಿಥ್ರೋಡರ್ಮಿಕ್ ಸೋರಿಯಾಸಿಸ್ ಒಂದು ಅಪರೂಪದ ರೀತಿಯ ತೀವ್ರತರದ ಸೋರಿಯಾಸಿಸ್ನ ಭೇದವಾಗಿದೆ. ಇದು ಬಹಳ ಗಂಭೀರವಾದ ಮತ್ತು ಪ್ರಾಣಕ್ಕೆ ಕುತ್ತು ತರಬಹುದಾದ ತೊಂದರೆಯಾಗಿದೆ. ಇಲ್ಲಿ ಸೋರಿಯಾಸಿಸ್ನ ಕೆಂಪಾದ ಕಲೆಗಳು ದೇಹದ ಶೇಕಡಾ ೮೦% ಕ್ಕೂ ಹೆಚ್ಚು ಆವರಿಸಿಕೊಂಡು ಹೆಚ್ಚಿನ ದಪ್ಪವಿಲ್ಲದ ಹಾಗು ಚರ್ಮದ ಚಕ್ಕೆಗಳ ಉದುರುವಿಕೆಗಳಿಲ್ಲದ ಕಂಡುಬರುತ್ತದೆ. ಎರಿಥ್ರೋಡರ್ಮಿಕ್ ಸೋರಿಯಾಸಿಸ್ ಸಾಮಾನ್ಯವಾಗಿ ತೀವ್ರವಾದ ಪ್ಲೇಕ್ ಸೋರಿಯಾಸಿಸ್ ಉಲ್ಬಣಗೊಂಡು ಎರಡನೆ ವ್ಯಾಧಿಯಾಗಿ ಕಾಣಿಸಿಕೊಳ್ಳುವುದುಂಟು.
ಇದು ದೇಹದಲ್ಲಿನ ಇತರೇ ಸೋಂಕುಗಳಿಂದ ಕೂಡ ಕಾಣಿಸಿಕೊಳ್ಳಬಹುದು. ಭಾವನಾತ್ಮಕ ಒತ್ತಡ ಅಥವಾ ಕಾರ್ಟಿಕೊಸ್ಟೆರಾಯ್ಡ್ಸ್ ಮತ್ತು ಮೆಥೊಟ್ರೆಕ್ಸೇಟ್ನಂತಹ ಔಷಧಿಗಳನ್ನು ಹಠಾತ್ತನೆ ಹಿಂತೆಗೆದುಕೊಳ್ಳುವುದೂ ಎರಿಥ್ರೋಡರ್ಮಿಕ್ ಸೋರಿಯಾಸಿಸ್ ಕಾರಣವಾಗಬಹುದು. ಈ ವಿಧವಾದ ಸೋರಿಯಾಸಿಸ್ ಚಿಕಿತ್ಸೆಗೆ ಕಷ್ಟಸಾಧ್ಯವಾಗಿದ್ದು ಪ್ರಾಣಕ್ಕೆ ಅಪಾಯವಾಗಬಲ್ಲ ಹೃದಯ ಸ್ತಂಭನದಂತ ಸ್ಥಿತಿಗಳಿಗೆ ಕಾರಣವಾಗಬಲ್ಲದು.
ಎರಿಥ್ರೋಡರ್ಮಿಕ್ ಸೋರಿಯಾಸಿಸ್ನ ಪ್ರಮುಖ ತೊಂದರೆಗಳು :
- ದೇಹದೆಲ್ಲೆಲ್ಲ ಕಂಡುಬರುವ ಕೆಂಪುಬಣ್ಣದ ಎರಿಥ್ರೋಡರ್ಮಿಕ್ ಸೋರಿಯಾಸಿಸ್ನಲ್ಲಿ ರಕ್ತನಾಳಗಳ ಹಿಗ್ಗುವುಕೆಯಿಂದಾಗಿ ದೇಹದ ಉಷ್ಣತೆಯನ್ನು ನಿಯಂತ್ರಿಸುವ ವ್ಯವಸ್ಥೆಯ ಕುಸಿತದಿಂದಾಗಿ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ.(Hypothermia)
- ನಿರಂತರವಾದ ಚರ್ಮದ ಉದುರುವಿಕೆಯಿಂದ ದೇಹದಲ್ಲಿನ ಪ್ರೋಟೀನ್ ನಷ್ಟಗೊಂಡು ಹೈಪೋಅಲ್ಬ್ಯುಮಿನಿಯಾ ಎಂಬ ಸ್ಥಿತಿಯನ್ನು ಉಂಟುಮಾಡುತ್ತದೆ. ಇದರಿಂದ ದೇಹದ ಅಂಗಾಂಗಗಳ ಊತ ಕಂಡುಬಂದು ಮತ್ತು ಹೆಚ್ಚಿನ ಉತ್ಪಾದನೆಯಿಂದ ಹೃದಯ ವೈಫಲ್ಯಕ್ಕೆ ಕಾರಣವಾಗುತ್ತದೆ.
ಜೆನೆರಲೈಜ್ಡ್ ಪಸ್ಟುಲರ್ ಸೋರಿಯಾಸಿಸ್ – ಜಿಪಿಪಿ (Generalized pustular psoriasis -GPP)
ಜೆನೆರಲೈಜ್ಡ್ ಪಸ್ಟುಲರ್ ಸೋರಿಯಾಸಿಸ್ ಮತ್ತೊಂದು ಅಪರೂಪವಾಗಿ ಕಾಣಿಸಿಕೊಳ್ಳುವ ಸೋರಿಯಾಸಿಸ್ ಭೇದವಾಗಿದೆ ಮತ್ತು ಇದನ್ನು ವಾನ್ ಜುಂಬುಶ್ ಸೋರಿಯಾಸಿಸ್ (Von Zumbush psoriasis) ಎಂದೂ ಕರೆಯುತ್ತಾರೆ. ಇದು ಸಾಮಾನ್ಯವಾಗಿ ಚಿಕ್ಕ ವಯಸ್ಸಿನವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ತರಹದ ಸೋರಿಯಾಸಿಸ್ ಸ್ವತಂತ್ರ ರೋಗವಾಗಿ ಅಥವಾ ಸೋರಿಯಾಸಿಸ್ ವುಲ್ಗಾರಿಸ್ ಎಂಬ ವಿಧವಾದ ಸೋರಿಯಾಸಿಸ್ನ ಸಮಸ್ಯೆಯಾಗಿ ಕೂಡ ಕಾಣಿಸಿಕೊಳ್ಳಬಹುದು. ಇದಲ್ಲದೆ ಕಾರ್ಟಿಕೊಸ್ಟೆರಾಯ್ಡ್ಗಳೆಂಬ ಔಷಧಿಗಳ ನಿಲ್ಲಿಸುವಿಕೆ, ಸೂರ್ಯನ ತೀಕ್ಷ್ಣ ಕಿರಣಗಳಿಗೆ ತೆರೆದುಕೊಳ್ಳುವಿಕೆ, ಕ್ಯಾಲ್ಸಿಯಂನ ಕೊರತೆ ಹಾಗು ಇನ್ನಾವುದೇ ಸೋಂಕುಗಳಿಂದಲೂ ಇವು ಹೆಚ್ಚಾಗಬಹುದು.
ಇಲ್ಲಿ ವಂಶಾವಳಿಗಳ ಅಂಶವೂ ಕೂಡಾ ಒಂದು ಕಾರಣವೆಂದು ಗುರುತಿಸಲಾಗಿದೆ, ಈ ಬದಲಾವಣೆಯು IL36RN ಎಂಬ ವರ್ಣತಂತುವಿನ ಬದಲಾವಣೆಯಿಂದ ಎಂದು ಹೇಳಲಾಗಿದೆ. ಈ ಬದಲಾವಣೆಯಿಂದ ಇದು ಹೆಚ್ಚಿನ IL 36 ಉತ್ತೇಜನಕ್ಕೆ ಕಾರಣವಾಗಿ ಪ್ರೋಇನ್‌ಫ್ಲಾಮೇಟರಿ ಸೈಟೊಕಿನ್‌ಗಳ ಹೆಚ್ಚಳಕ್ಕೆ ಕಾರಣವಾಗಿ ಜೆನೆರಲೈಜ್ಡ್ ಪಸ್ಟುಲರ್ ಸೋರಿಯಾಸಿಸ್ನನನ್ನು ಹೆಚ್ಚಿಸುತ್ತದೆ. ಜೆನೆರಲೈಜ್ಡ್ ಪಸ್ಟುಲರ್ ಸೋರಿಯಾಸಿಸ್ ರಸಿಕೆ ತುಂಬಿದ ಬೊಕ್ಕೆಗಳಿಂದ ಕೂಡಿದ್ದು ದೇಹದೆಲ್ಲೆಡೆ ವ್ಯಾಪಿಸಿರುವ ಕೆಂಪಾದ ದಡಿಕೆಗಳ ಮುಂಬಾಗದಲ್ಲಿ ಕಂಡುಬರುತ್ತದೆ ಹಾಗು ಇದೊಂದು ಸಾಂಕ್ರಾಮಿಕವಲ್ಲದ ರೋಗವಾಗಿದೆ. ಇದರೊಂದಿಗೆ ಜ್ವರ, ಶೀತ, ದೇಹಾಲಸ್ಯ ಕೀಲುಗಳ ನೋವು ಮುಂತಾದ ಲಕ್ಷಣಗಳು ಹೆಚ್ಚಿದ ಲ್ಯುಕೋಸೈಟ್ಗಳ ಕಾರಣದಿಂದಾಗಿರಬಹುದು.
ರೋಗದ ಅವಸ್ಥೆಯು ರೋಗದ ಹೆಚ್ಚಾದ ಮರುಕಳಿಸುವಿಕೆ, ನಂಜಿನ ಬೆಳವಣಿಗೆ ಹಾಗು ಹೃದಯ ವೈಫಲ್ಯದಿಂದ ರೋಗವನ್ನು ಇನ್ನಷ್ಟು ಸಂಕೀರ್ಣಗೊಳಿಸಬಹುದು. ಜೆನೆರಲೈಜ್ಡ್ ಪಸ್ಟುಲರ್ ಸೋರಿಯಾಸಿಸ್ನ ರೋಗಿಗಳ ನಿರ್ವಹಣೆ ಸಾಕಷ್ಟು ಜಲಾಂಶವನ್ನು ಖಚಿತಪಡಿಸಿಕೊಳ್ಳಲು ಮತ್ತು ರೋಗದಲ್ಲಿ ಮಾರಣಾಂತಿಕತೆಯನ್ನು ತಡೆಗಟ್ಟಲು ಉತ್ತಮ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ನೀಡುವುದರಿಂದ ರೋಗದಿಂದ ಸಂಭವಿಸಬಹುದಾದ ಪ್ರಾಣಾಪಾಯವನ್ನು ತಡೆಯಬಹುದು.
ಜೆನೆರಲೈಜ್ಡ್ ಪಸ್ಟುಲರ್ ಸೋರಿಯಾಸಿಸ್ನ್ ಮತ್ತೊಂದು ವಿಧವಾದ ತೊಂದರೆ ಗರ್ಭಾವಸ್ಥೆಯ ಮೂರನೇ ಹಂತದಲ್ಲಿ ಕಂಡುಬರುತ್ತದೆ. ಇದನ್ನು ಇಂಪೆಟಿಗೋ ಹರ್ಪೆಟಿಫಾರ್ಮಿಸ್ (impetigo herpetiformis) ಎಂದು ಕರೆಯುತ್ತಾರೆ. ಇದರಲ್ಲಿ ಲೋಳೆಪೊರೆ ಹಾಗು ಉಗುರು ಉಗುರಿನ ಚರ್ಮದಿಂದ ಬೇರ್ಪಡುವಿಕೆಯು ಲಕ್ಷಣಗಳು ಹೆಚ್ಚುವರಿಯಾಗಿ ಕಾಣಿಸಿಕೊಳ್ಳುತ್ತದೆ. ಇದು ಭ್ರೂಣದ ವೈಪರೀತ್ಯಗಳಿಗೆ ಕಾರಣವಾಗುವ ಸಂಭವ ಹೆಚ್ಚ್ಚಾಗಿದ್ದು ಮುಂದಿನ ಗರ್ಭಧಾರಣೆಯ ಸಮಯದಲ್ಲೂ ಮರುಕಳಿಸುವಿಕೆಯ ಅಪಾಯವೂ ಇದೆ.
ಪಾಮೋಪ್ಲಾಂಟರ್ ಪಸ್ಟುಲರ್ ಸೋರಿಯಾಸಿಸ್ (Localized palmoplantar pustular psoriasis)
ಪಾಮೋಪ್ಲಾಂಟರ್ ಪಸ್ಟುಲರ್ ಸೋರಿಯಾಸಿಸ್ ಕೈ ಹಾಗು ಕಾಲುಗಳಿಗೆ ಸೀಮಿತವಾಗಿರುವ ಒಂದು ವಿಧವಾಗಿದೆ. ಹೆಚ್ಚಾಗಿ ಇದು ೨೦ರಿಂದ ೬೦ನೇ ವರ್ಷದ ಮಧ್ಯ ಕಾಣಿಸಿಕೊಳ್ಳುತ್ತದೆ ಹಾಗು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಧೂಮಪಾನದ ಅಭ್ಯಾಸ ಹೊಂದಿರುವ ವ್ಯಕ್ತಿಗಳು ವಿಶೇಷವಾಗಿ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಇಲ್ಲಿ ಗಾಯಗಳು ಹಳದಿ ಬಣ್ಣದ ಬೊಕ್ಕೆಗಳು ಕೀವುನಿಂದ ಕೂಡಿದ್ದು ಕೆಂಪು ಬಣ್ಣದ ದಡಿಕೆಗಳ ಹಿನ್ನಲೆಯೊಂದಿಗೆ ಚರ್ಮದ ಚಕ್ಕೆಗಳೊಂದಿಗೆ ಕಾಣಿಸಿಕೊಳ್ಳುತ್ತದೆ. ಇದು ಅಂತಿಮವಾಗಿ ಗಾಢ ಕಂದುಬಣ್ಣದ ವರ್ಣದೊಂದಿಗೆ ಚಕ್ಕೆಗಳಿಗೆ ಅಂಟಿಕೊಂಡು ಕಡಿಮೆಯಾಗುತ್ತವೆ.
ಸೋರಿಯಾಸಿಸ್ನ ಇತರ ತೊಂದರೆಗಳು (Poriasis complications)
ಉಗುರುವಿನ ವಿಕೃತಿಗಳು (nail psoriasis)

ಹೆಚ್ಚಿನ ಸೋರಿಯಾಸಿಸ್ ರೋಗಿಗಳಲ್ಲಿ ಉಗುರುವಿನ ವಿಕೃತಿಯು ಒಂದು ಸಾಮಾನ್ಯ ಲಕ್ಷಣವಾಗಿದೆ. ಆದರೆ ಉಗುರಿನ ಸೋರಿಯಾಯಾಸಿಸ್ನನ್ನು ಕೇವಲ ಉಗುರುವಿನ ಲಕ್ಷಣಗಳನ್ನು ಗಮನಿಸಿ, ಯಾವುದೇ ಚರ್ಮದ ಲಕ್ಷಣಗಳಿಲ್ಲದೆ ರೋಗನಿರ್ಣಯವನ್ನು ಮಾಡುವುದು ಒಂದು ಕ್ಲಿಷ್ಟಕರವಾದ ಪ್ರಕ್ರಿಯೆ. ಉಗುರಿನ ಸೋರಿಯಾಸಿಸ್ ಲಕ್ಷಣಗಳು ಬಹುವಿಧವಾಗಿ ಕಾಣಿಸಿಕೊಳ್ಳಬಹುದು ಹಾಗು ಸಂಮಾನ್ಯವಾಗಿ ಕಂಡುಬರುವ ಲಕ್ಷಣಗಳೆಂದರೆ ಉಗುರಿನ ಮೇಲೆ ಕಂಡುಬರುವ ಸಣ್ಣ ಗುಳಿಗಳು.
ಇವು ಸಾಮಾನ್ಯವಾಗಿ ಸೂಜಿಮೊನೆಯಿಂದ ಚುಚ್ಚಿದ ರೀತಿ ಕಂಡುಬರುತ್ತದೆ. ಇವು ಉಗುರಿ ಫಲಕಗಳ ಪರಾಕೆರಾಟೋಟಿಕ್ ಕೋಶಗಳ ಹಾನಿಯಿಂದಾಗಿ ಕಾಣಿಸಿಕೊಳ್ಳುತ್ತವೆ. ಇದರೊಂದಿಗೆ ಉಗುರು ಫಲಕಗಳ ಹಾನಿ ಹಾಗು ಗಾತ್ರದ ವೃದ್ಧಿ ಕಂಡುಬರುತ್ತದೆ. ಇದಲ್ಲದೆ, ಉಗುರಿನ ಕೆಳಗಿನ ಚರ್ಮ ದಪ್ಪಗಾಗುವಿಕೆ ಉಗುರು ಚರ್ಮದಿಂದ ಬೇರ್ಪಡುವಿಕೆಗೆ ಕಾರಣವಾಗಬಹುದು, ಇದನ್ನು ಒನಿಕೊಲಿಸಿಸ್ ಎಂದೂ ಕರೆಯುತ್ತಾರೆ. ಸಮಾನ್ಯವಾಗಿ ಇದು ಉಗುರಿನ ತುದಿಯಿಂದ ಉಗುರಿನ ಬುಡಕ್ಕೆ ಹರಡುತ್ತದೆ. ಈ ಬದಲಾವಣೆಗಳ ಜೊತೆಗೆ, ಉಗುರುಗಳು ಕಿತ್ತಳೆ ಅಥವಾ ಕಂದು ಮಿಶ್ರಿತ ಹಳದಿ ಬಣ್ಣದ ಹನಿಗಳಂತ ಲಕ್ಷಣಗಳು ಉಗುರು ಫಲಕದ ಕೆಳಗೆ ಕಾಣಿಸಿಕೊಳ್ಳಬಹುದು. ಇದನ್ನು “ಆಯಿಲ್ ಡ್ರಾಪ್” ವರ್ಣಕಾರಕವೆಂದು ಎಂದು ಕರೆಯಲ್ಪಡುತ್ತವೆ.
ಸೋರಿಯಾಟಿಕ್ ಆರ್ಥ್ರೈಟಿಸ್/ಸೋರಿಯಾಟಿಕ್ ಸಂಧಿವಾತ (Psoriatic arthritis)

