ಸೋರಿಯಾಸಿಸ್ಗೆ 5 ಅತ್ಯುತ್ತಮ ಮನೆ ಮದ್ದುಗಳು
ಚರ್ಮದ ಉದುರುವಿಕೆ, ಶುಷ್ಕತೆ ಮತ್ತು ಬಿರುಕುಗಳಂತಹ ಸೋರಿಯಾಸಿಸ್ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಇವು ಹೆಚ್ಚು ಪರಿಣಾಮಕಾರಿ. ಸೋರಿಯಾಸಿಸ್ಗೆ ಹಲವಾರು ಮನೆ ಮದ್ದುಗಳು ಇದ್ದರು ಕೆಲವೊಂದರ ಅಲಭ್ಯತೆ ಹಾಗು ಉಪಯೋಗಿಸಲು ಕ್ಲಿಷ್ಟಕರವಾಗಿವೆ. ಈ ಕೆಳಗೆ ತಿಳಿಸಿರುವ ಮನೆಮದ್ದುಗಳು ಸುಲಭವಾಗಿ ಅನುಸರಿಸಲು ಯೋಗ್ಯವಾಗಿದ್ದು ನಿಯಮಿತವಾಗಿ ಬಳಸಿದಾಗ ಅವು ಹೆಚ್ಚು ಪರಿಣಾಮಕಾರಿ ಎಂದು ನಾವು ಕಂಡುಕೊಂಡಿದ್ದೇವೆ. ಇವುಗಳ ಉಪಯೋಗವು ಚರ್ಮದ ಒರಟುತನ, ಚಕ್ಕೆಗಳ ರೂಪದಲ್ಲಿ ಉದುರುವಿಕೆ, ತುರಿಕೆ ಮುಂತಾದ ಲಕ್ಷಣಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಲ್ಲುದು. ನೀವು ಈ ಸಲಹೆಗಳನ್ನು ನಿಯಮಿತವಾಗಿ ಅನುಸರಿಸಿದರೆ ಇವು ಉತ್ತಮ ಫಲಿತಾಂಶಗಳನ್ನು ನೀಡಬಲ್ಲವು.
ಹಳೆಯ ತುಪ್ಪ:
ಹಳೆಯ ತುಪ್ಪದ ಹಚ್ಚುವಿಕೆಯು ಸೋರಿಯಾಸಿಸ್ನಲ್ಲಿ ಪ್ರಯೋಜನಕಾರಿಯಾಗಿದೆ. ಒಂದು ವರ್ಷಕ್ಕಿಂತಲೂ ಹಳೆಯದಾದ ತುಪ್ಪವು ತ್ರಿದೋಶಗಳನ್ನು (ವಾತ, ಪಿತ್ತ, ಕಫ) ಶಮನಗೊಳಿಸುವ ಹಾಗು ಚರ್ಮದ ರೋಗಗಳನ್ನು ಗುಣಪಡಿಸುವ ಮತ್ತು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ. ತುಪ್ಪವು ವರ್ಷಗಳು ಕೆಳೆದಂತೆ ಅದರ ಚಿಕಿತ್ಸಾ ಗುಣಗಳು ವೃದ್ಧಿಗೊಳ್ಳುತ್ತಾ ಹೋಗುತ್ತದೆ. ಹಳೇ ತುಪ್ಪವು ಚಿಕಿತ್ಸೆಯಲ್ಲಿ ಅತ್ಯಂತ ಉತ್ತಮವಾಗಿದೆ.
ವ್ಯಾಯಾಮ:
ನಮ್ಮ ದೇಹದ ಬೆವರುವಿಕೆ ಸೋರಿಯಾಸಿಸ್ ರೋಗಿಗಳ ಚರ್ಮವನ್ನು ಮೃದುವಾಗಿಸಿ, ಚರ್ಮದ ಒಣಗುವಿಕೆ ಹಾಗು ತುರಿಕೆಯನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ. ದಿನನಿತ್ಯದ ವ್ಯಾಯಾಮವು ದೇಹದಲ್ಲಿ ಬೆವರುವಿಕೆಯನ್ನು ಉಂಟುಮಾಡಿ ನಮ್ಮ ಇಮ್ಮ್ಯೂನ್ ವ್ಯವಸ್ಥೆಯನ್ನು ಸರಿಮಾಡುವಲ್ಲಿ ಸಹಕರಿಸುತ್ತದೆ. ಬೆವರು ದೇಹದಲ್ಲಿನ ಕಲ್ಮಶಗಳನ್ನು ಹೊರಹಾಕುತ್ತದೆ. ದಿನ ನಿತ್ಯ ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಬೆವರು ಮೂಡುವಷ್ಟು ವ್ಯಾಯಾಮ ಮಾಡುವುದರಿಂದ ಸೋರಿಯಾಸಿಸ್ನ ಲಕ್ಷಣಗಳಲ್ಲಿ ಉತ್ತಮ ಬದಲಾವಣೆ ಕಾಣಬಹುದು.
ಸಾವಯವ ಆಹಾರ:
ನಮ್ಮ ಆರೋಗ್ಯವು ನಾವು ತೆಗೆದುಕೊಳ್ಳುವ ಆಹಾರದ ಮೇಲೆ ನಿರ್ಭರವಾಗಿದೆ. ಇಂದಿನ ಆಹಾರದ ಜೊತೆಗೆ ನಾವು ಅವುಗಳನ್ನು ಬೆಳೆಯಲು ಬಳಸಿದ ರಾಸಾಯನಿಕಗಳು ಮತ್ತು ಕೀಟನಾಶಕಗಳನ್ನು ಕೂಡಾ ಸೇವಿಸುತ್ತೇವೆ. ಇವುಗಳ ಪ್ರಮಾಣವು ಅತ್ಯಲ್ಪವಾದರೂ ನಿರಂತರ ಸೇವನೆಯಿಂದ ನಿಧಾನವಾಗಿ ದೇಹದ ಜೀವಕೋಶಗಳ ಕಾರ್ಯಗಳಲ್ಲಿ ಬದಲಾವಣೆ ಕಂಡುಬರಬಹುದು. ಈ ಬದಲಾವಣೆಗಳು ಹೆಚ್ಚಾಗಿ ರೋಗ ಕಾರಕವಾಗಿರುತ್ತವೆ. ಸೋರಿಯಾಸಿಸ್ನಂತಹ ರೋಗಗಳ ಉಂಟಾಗುವಿಕೆಯಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಸಾವಯವ ಆಹಾರದ ಸೇವನೆಯು ದೇಹಕ್ಕೆ ಆಹಾರದ ಜೊತೆಗೆ ಪ್ರವೇಶಿಸುವ ಹಾನಿಕಾರಕ ರಾಸಾಯನಿಕಗಳನ್ನು ತಡೆದು ಅತ್ಯಂತ ಉತ್ತಮ ಪೋಷಕಾಂಶಗಳನ್ನು ನೀಡುತ್ತದೆ. ಸಾವಯವ ಆಹಾರಗಳು ನೈಸರ್ಗಿಕ ಪೌಷ್ಠಿಕಾಂಶದ ಅಂಶಗಳಿಂದ ಸಮೃದ್ಧವಾಗಿರುವುದರಿಂದ ಇವು ದೇಹದ ಧಾತುಗಳಿಗೆ ಸರಿಯಾದ ಪೋಷಣೆಯನ್ನು ನೀಡುವಲ್ಲಿ ಸಫಲವಾಗುತ್ತವೆ. ಸಾವಯವ ಆಹಾರದ ಮತ್ತೊಂದು ಪ್ರಯೋಜನವೆಂದರೆ ಆಹಾರ, ರಾಸಾಯನಿಕಗಳು ಅಥವಾ ಸಂರಕ್ಷಕಗಳಿಗೆ ಅಲರ್ಜಿಯನ್ನು ಹೊಂದಿರುವ ಜನರು, ಸಾವಯವ ಆಹಾರಕ್ಕೆ ಬದಲಾಯಿಸುವ ಮೂಲಕ ರೋಗಲಕ್ಷಣಗಳು ಕಡಿಮೆಯಾಗುತ್ತವೆ ಅಥವಾ ಸಂಪೂರ್ಣವಾಗಿ ಗುಣವಾಗುತ್ತವೆ ಎಂದು ಕಂಡುಹಿಡಿದಿದ್ದಾರೆ.
ಧ್ಯಾನ:
ಸೋರಿಯಾಸಿಸ್ನಲ್ಲಿ ಒತ್ತಡವು ಪ್ರಚೋದಕ ಅಂಶಗಳಲ್ಲಿ ಒಂದಾಗಿರುವುದರಿಂದ, ಒತ್ತಡರಹಿತ ಜೀವನವನ್ನು ನಡೆಸುವುದು ಸೋರಿಯಾಸಿಸ್ನ ಹೆಚ್ಚುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಧ್ಯಾನವು ಮಾನಸಿಕ ಒತ್ತಡವನ್ನು ಕಡಿಮಾಡಬಲ್ಲ ಒಂದು ಉತ್ತಮ ಉಪಾಯವಾಗಿದೆ. ನಿರಂತರ ಧ್ಯಾನದ ಅಭ್ಯಾಸವು ಮನಸ್ಸಿನ ಚಂಚಲತೆಯನ್ನು ನಿಗ್ರಹಿಸಿ ಮಾನಸಿಕ ಒತ್ತಡವನ್ನು ಕಡಿಮೆ ಮಾಡುವುದರಲ್ಲಿ ಸಹಾಯ ಮಾಡುತ್ತದೆ. ದಿನನಿತ್ಯ 20 ರಿಂದ 30 ನಿಮಿಷಗಳ ಧ್ಯಾನವು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಾನಸಿಕ ಒತ್ತಡದಿಂದ ಹೆಚ್ಚಾಗುವ ಸೋರಿಯಾಸಿಸನ್ನು ನಿಯಮಿತ ಧ್ಯಾನದ ಅಭ್ಯಾಸದ ಮೂಲಕ ನಿಯಂತ್ರಿಸಬಹುದು. ಇದೊಂದು ಅತ್ಯಂತ ಪರಿಣಾಮಕಾರಿಯಾದ ವಿಧಾನವಾಗಿದೆ.
ಸೋಪ್ ಮತ್ತು ಶ್ಯಾಂಪೂಗಳ ಬಳಕೆಯನ್ನು ನಿಲ್ಲಿಸುವುದು :
ಕೆಲವೊಂದು ಸಾಬೂನು ಮತ್ತು ಶ್ಯಾಂಪೂಗಳು ಚರ್ಮದಲ್ಲಿರುವ ನೈಸರ್ಗಿಕ ಮಾರ್ದವತೆಯನ್ನು ತೆಗೆದುಹಾಕಿ ಚರ್ಮದ ಶುಷ್ಕತೆಗೆ ಕಾರಣವಾಗುತ್ತದೆ. ಮೊದಲೇ ಚರ್ಮದ ಶುಷ್ಕತೆ ಇರುವಂತಹ ಸೋರಿಯಾಸಿಸ್ನಂತಹ ರೋಗಗಳಲ್ಲಿ ಸೋಪ್ ಹಾಗು ಶಾಂಪೂಗಳ ಬಳಕೆಯನ್ನು ಅತ್ಯಂತ ಜಾಗರೂಕತೆಯಿಂದ ಮಾಡಬೇಕು. ಇಲ್ಲದಿದ್ದಲ್ಲಿ ಇವು ಶುಷ್ಕತೆಯನ್ನು ಹೆಚ್ಚಿಸಿ ಚರ್ಮದಲ್ಲಿ ತುರಿಕೆ ಹಾಗು ಚಕ್ಕೆಗಳ ಬೀಳುವಿಕೆಗೆ ಕಾರಣವಾಗಬಲ್ಲುದು. ಸೋರಿಯಾಸಿಸ್ನಲ್ಲಿ ಸೋಪು ಹಾಗು ಶಾಂಪೂಗಳ ಬದಲಾಗಿ ಹೆಸರು ಕಾಳಿನ ಹಿಟ್ಟು ಅಥವಾ ಕಡಲೆ ಹಿಟ್ಟನ್ನು ಸ್ವಲ್ಪ ಅಂಟುವಾಳ ಕಾಯಿಯ ಜೊತೆಗೆ ಸೇರಿಸಿ ಬಳಸಬಹುದು. ತಲೆಗೆ ಸೀಗೆ ಕಾಯಿ ಪುಡಿಯನ್ನೂ ಶಾಂಪೋಗಳ ಬದಲಿಗೆ ಉಪಯೋಗಿಸಬಹುದು.
ಈ ಎಲ್ಲಾ ಮನೆ ಮದ್ದುಗಳು ಸೋರಿಯಾಸಿಸ್ನ ತೀವ್ರತೆಯ ಲಕ್ಷಣಗಳನ್ನು ಕಡಿಮೆ ಮಾಡಬಲ್ಲುದೆ ಹೊರತು ಸೋರಿಯಾಸಿಸ್ ಅನ್ನು ವಾಸಿಮಾಡಲಾರವು. ಸೋರಿಯಾಸಿಸ್ ನಮ್ಮ ದೇಹದ ಇಮ್ಯೂನ್ ವ್ಯವಸ್ಥೆಯ ವೈಪರೀತ್ಯದಿಂದ ಉಂಟಾಗುವ ರೋಗವಾಗಿದ್ದು ಈ ಕಾರಣವನ್ನು ಸರಿಪಡಿಸಿದರೆ ಮಾತ್ರವೇ ರೋಗವು ವಾಸಿಯಾಗಬಲ್ಲದು. ಔಷಧಗಳೊಂದಿಗೆ ಈ ಮನೆಮದ್ದುಗಳು ಸೋರಿಯಾಸಿಸ್ ಅನ್ನು ಶೀಘ್ರ ಶಮನಗೊಳಿಸುವಲ್ಲಿ ಬಹು ಉಪಯೋಗಿಯಾಗಿವೆ.
ಸೋರಿಯಾಸಿಸ್ ಒಂದು ವಾಸಿಯಾಗದ ರೋಗವೆಂದು ಪರಿಗಣಿಸಲ್ಪಟ್ಟರೂ ಆಯುರ್ವೇದ ಚಿಕಿತ್ಸೆಗಳಿಂದ ಅತ್ಯುತ್ತಮವಾದ ಪರಿಹಾರವನ್ನು ಪಡೆಯಬಹುದು.
ಸೋರಿಯಾಸಿಸ್ಗೆ ಆಯುರ್ವೇದೀಯ ತಜ್ಞ ವೈದ್ಯರಾದ ಡಾ.ಚೈತನ್ಯ ಭೇಟಿ ಮಾಡಲು 9945850945 ಕರೆ ಮಾಡಿ.
ಸೋರಿಯಾಸಿಸ್ ರೋಗದ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುವಿಕೆಯೇ ಚಿಕಿತ್ಸೆಯ ಮೊದಲ ಹಂತ. ಸೋರಿಯಾಸಿಸ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲೇಖನಗಳನ್ನು ಓದಿರಿ.
- ಸೋರಿಯಾಸಿಸ್ ಲಕ್ಷಣಗಳು, ವಿಧಗಳು ಮತ್ತು ಚಿಕಿತ್ಸೆ
- Psoriasis Case Study – 1
- Ayurvedic Treatment for Psoriatic Arthritis
ಈ ಲೇಖನವನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿ ಅತ್ಯಧಿಕ ಸೋರಿಯಾಸಿಸ್ ರೋಗಿಗಳನ್ನು ತಲುಪಲು ನೆರವಾಗಿ.