Sharing is caring!

ಸೋರಿಯಾಸಿಸ್ ಎಂದರೇನು ? 

ಸೋರಿಯಾಸಿಸ್ ಒಂದು ಚರ್ಮದ  ರೋಗವಾಗಿದೆ. ಪ್ರಪಂಚದಲ್ಲಿ ಸಾಮಾನ್ಯವಾಗಿ ಇತರರನ್ನು ನೋಡುವ ಅಥವಾ ಗಮನಿಸುವ ಮೊದಲ ಅಂಗವೇ ಚರ್ಮವಾಗಿದೆ .   ಆರೋಗ್ಯವಂತ ಚರ್ಮವು ನಮ್ಮ ಆರೋಗ್ಯದ ಸ್ಥಿತಿಯನ್ನು ಮತ್ತು ಆತ್ಮ ವಿಶ್ವಾಸದ ಮೇಲೆ ಗಾಢ ಪರಿಣಾಮ ಬೀರುತ್ತದೆ .

ಆದರೆ ಜಗತ್ತಿನಾದ್ಯಂತ ಅನೇಕರು ಅನೇಕ ಚರ್ಮ ರೋಗಗಳಿಂದ ಬಳಲುತ್ತಿದ್ದಾರೆ. ಹೆಚ್ಚಿನ ಚರ್ಮ ರೋಗಗಳು ನಿರ್ಧಿಷ್ಟ ಅಥವಾ ಸೀಮಿತ ಅವಧಿಗೆ ಕಾಣಿಸಿಕೊಂಡು ಸೂಕ್ತ ಚಿಕಿತ್ಸೆಯಿಂದ ವಾಸಿಯಾಗುತ್ತದೆ .   ಇನ್ನೂ ಕೆಲವು ಚರ್ಮ ರೋಗಗಳು ಜನರನ್ನು ಜೀವನದುದ್ದಕ್ಕೂ ಕಾಡಿಸಿ, ಯಾವುದೇ ಚಿಕಿತ್ಸೆಗೂ ಬಗ್ಗದೆ, ವಾಸಿಯಾಗದೆ ವ್ಯಕ್ತಿಗಳನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಘಾಸಿಗೊಳಿಸುತ್ತದೆ .  

ಇಂತಹ ಸಂಪೂರ್ಣವಾಗಿ ವಾಸಿಯಾಗದ ಹಾಗೂ ಜೀವನ ಪರ್ಯಂತ ಬಾಧಿಸುವ ಚರ್ಮರೋಗಗಳಲ್ಲಿ ಸೋರಿಯಾಸಿಸ್ ಒಂದು .   ಸೋರಿಯಾಸಿಸ್ ಎಂಬ ಪದವು ಗ್ರೀಕ್ ಭಾಷೆಯ PSORA  ಮತ್ತು ISIS  ಎಂಬ ಪದಗಳ ಜೋಡಣೆಯಿಂದ ಬಂದಿದೆ. ಇಲ್ಲಿ PSORA ಎಂದರೆ ತುರಿಕೆ, ಮತ್ತು ISIS ಎಂದರೆ ಕೂಡಿದ ಎಂದರ್ಥ. ಹಾಗಾಗಿ ಸೋರಿಯಾಸಿಸ್ ಪದದ ಅರ್ಥವು ತುರಿಕೆಯಿಂದ ಕೂಡಿದ ಒಂದು ಸ್ಥಿತಿ ಎನ್ನಬಹುದು . 

ಆಧುನಿಕ ವೈದ್ಯ ವಿಜ್ಞಾನವು ಸೋರಿಯಾಸಿಸ್ ಅನ್ನು ದೀರ್ಘಕಾಲ ಕಾಡುವ ದೇಹದ ರೋಗನಿರೋಧಕ ವ್ಯವಸ್ಥೆಯ (immune system) ಅತಿ ಪ್ರಚೋದನೆಯಿಂದ ಉಂಟಾಗುವ ಒಂದು ತೊಂದರೆ ಎಂದು ಹೇಳುತ್ತದೆ . ಅಥವಾ ಒಂದು ಆಟೋ ಇಮ್ಯೂನ್ (autoimmune) ತೊಂದರೆಯೆಂದು ಕರೆಯುತ್ತಾರೆ . 

ಸೋರಿಯಾಸಿಸ್ ತೊಂದರೆಯು ಚರ್ಮದಲ್ಲಿ ಕೆಂಪಾದ, ಕಂದು  ಮಿಶ್ರಿತ ಬಣ್ಣದಿಂದ ಕೂಡಿದ ಕಲೆಗಳನ್ನು (patch) ಮತ್ತು ಚರ್ಮಕೋಶಗಳ ಉದುರುವಿಕೆಯ ಲಕ್ಷಣಗಳಿಂದ ಕೂಡಿರುತ್ತವೆ . 

ಸೋರಿಯಾಸಿಸ್ ದೇಹದ ಯಾವುದೇ ಭಾಗದಲ್ಲಿ ಕೂಡಾ ಕಾಣಿಸಿಕೊಳ್ಳಬಹುದಾದರೂ ಹೆಚ್ಚಿನವರಲ್ಲಿ ಮೊಣಕೈ, ಮೊಣಕಾಲು, ತಲೆ ಅಥವಾ ಬೆನ್ನಿನ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ . 

ಸೋರಿಯಾಸಿಸ್ನಲ್ಲಿ ದೇಹದ ಇಮ್ಮ್ಯೂನ್ ಸಿಸ್ಟಮ್ ಆರೋಗ್ಯವಂತ ಚರ್ಮಕೋಶಗಳ ಮೇಲೆ ಧಾಳಿ ನಡೆಸಿ ಚರ್ಮಕೋಶಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ . ಈ ಅತೀ ಹೆಚ್ಚಾದ ಚರ್ಮದ ಕೋಶಗಳ ಉತ್ಪದನೆಯು ಚರ್ಮದ ಮೇಲ್ಪದರದಲ್ಲಿ ದಪ್ಪನೆಯ, ಪದರಗಳಿಂದ ಕೂಡಿದ ಗಂಧೆಗಳನನ್ನು (patches) ಉಂಟುಮಾಡುತ್ತದೆ . 

ಸೋರಿಯಾಸಿಸ್ ವ್ಯಕ್ತಿಯ ಜೀವನದ ಗುಣಮಟ್ಟದ ಮೇಲೆ ಗಾಢವಾದ ಪ್ರಭಾವವನ್ನು ಬೀರುತ್ತದೆ . ದೈಹಿಕ ಲಕ್ಷಣಗಳನ್ನು ಮೀರಿ ಭಾವನಾತ್ಮಕ ಯಾತನೆ, ಸಾಮಾಜಿಕ ಪ್ರತ್ಯೇಕತೆ ಮತ್ತು ಖಿನ್ನತೆಗೆ ಕಾರಣವಾಗಬಹುದು . 

ಇಂದು ಹೆಚ್ಚಿನ ಜನರಲ್ಲಿ ಸೋರಿಯಾಸಿಸ್ ಕಂಡು ಬಂದರೂ ಕೂಡ ಜನರಲ್ಲಿ ಇದರ ಬಗ್ಗೆ ಮಾಹಿತಿಯ ಕೊರತೆ ಹಾಗೂ ಅನೇಕ ತಪ್ಪು ಗ್ರಹಿಕೆಯನ್ನು ಹೊಂದಿದ್ದಾರೆ . ಅನೇಕರು ಇದೊಂದು ಸಾಂಕ್ರಾಮಿಕ ಅಥವಾ ದೇಹ ಸೌಂದರ್ಯದ ತೊಂದರೆಯೆಂದು ತಪ್ಪಾಗಿ ಗ್ರಹಿಸುತ್ತಾರೆ . 

ಸೋರಿಯಾಸಿಸ್ ಸಾಂಕ್ರಾಮಿಕ ಅಥವಾ ಕೇವಲ ಸೌಂದರ್ಯಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ. ಇದು ನಿರಂತರ ನಿರ್ವಹಣೆ ಮತ್ತು ಚಿಕಿತ್ಸೆಯ ಅಗತ್ಯವಿರುವ ದೀರ್ಘಕಾಲ ಕಾಡುವ ರೋಗವಾಗಿದೆ. 

ಸೋರಿಯಾಸಿಸ್ ಅನ್ನು ಸಂಪೂರ್ಣವಾಗಿ ವಾಸಿ ಮಾಡುವ ಯಾವುದೇ ಚಿಕಿತ್ಸೆ ಇಲ್ಲದಿದ್ದರೂ , ರೋಗ ಲಕ್ಷಣಗಳನ್ನು ನಿರ್ವಹಿಸಲು ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡಲು ವಿವಿಧ ಚಿಕಿತ್ಸೆಗಳ ನೆರವು ಅತ್ಯಗತ್ಯ . 

ನೀವು ಸೋರಿಯಾಸಿಸ್ ಇಂದ ಬಳಲುತಿದ್ದಲ್ಲಿ ರೋಗದ ಬಗ್ಗೆ ತಿಳುವಳಿಕೆ , ಪರಿಣಾಮಕಾರಿಯಾದ ಚಿಕಿತ್ಸೆ ಹಾಗೂ ಸೋರಿಯಾಸಿಸ್ ಅನ್ನು ಹೆಚ್ಚಿಸುವ ಅಥವಾ ಉತ್ತೇಜಿಸುವ ಅಂಶಗಳ ನಿವಾರಣೆಯಿಂದ ನೀವು ದೀರ್ಘಕಾಲ ಸೋರಿಯಾಸಿಸ್ ರಹಿತ ಆರೋಗ್ಯವಂತ ಜೀವನವನ್ನು ನಡೆಸಬಹುದು . 

ಪ್ರಪಂಚದಾದ್ಯಂತ ಎಷ್ಟು ಜನರು ಸೋರಿಯಾಸಿಸ್ನಿಂದ ಬಳಲುತ್ತಿದ್ದಾರೆ ?

ಸೋರಿಯಾಸಿಸ್ನೊಂದಿಗೆ ಜೀವನ ಪ್ರಯಾಣದಲ್ಲಿ ನೀವೊಬ್ಬರೇ ಒಂಟಿಯಾಗಿಲ್ಲ . ಇತ್ತೀಚೆಗೆ ಸೋರಿಯಾಸಿಸ್ನಿಂದ ಬಳಲುತ್ತಿರುವವರು ನಿಮ್ಮ ಸುತ್ತಲೂ ಇದ್ದಾರೆ. ಆದರೆ ಜನರು ಹಿಂಜರಿಕೆಯಿಂದ ಇದರ ಬಗ್ಗೆ ಮಾತನಾಡುವುದಿಲ್ಲ . 

ಇಂದು ಪ್ರಪಂಚದಾದ್ಯಂತ ಶೇ.3 % ರಷ್ಟು ಜನ ಸೋರಿಯಾಸಿಸ್ನಿಂದ ಬಳಲುತ್ತಿದ್ದಾರೆ  ಎಂದು ತಿಳಿಯಲಾಗಿದೆ .  ಅಂದರೆ ಹೆಚ್ಚು ಕಡಿಮೆ ನೀವು ನೋಡುವ 100  ಜನರಲ್ಲಿ ಮೂವರಿಗೆ ಸೋರಿಯಾಸಿಸ್ ಇಂದ ಬಾಧಿಸಲ್ಪಡುತ್ತಿರಬಹುದು . ಇತ್ತೀಚೆಗೆ  ಹೆಚ್ಚುತ್ತಿರುವ ಚರ್ಮ ರೋಗಗಳಲ್ಲಿ ಸೋರಿಯಾಸಿಸ್ (psoriasis) ಕೂಡಾ ಒಂದು . 

Sharing is caring!